ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ಬಯಕೆಗೆ ಕಡಿವಾಣ ಅಗತ್ಯ: ಕಲ್ಕತ್ತ ಹೈಕೋರ್ಟ್‌ನ ‘ಉಪದೇಶ’ದ ತೀರ್ಪು ವಜಾ

‘ಲೈಂಗಿಕ ಬಯಕೆಗೆ ಕಡಿವಾಣ ಅಗತ್ಯ’ ಎಂಬ ಅಭಿಪ್ರಾಯಕ್ಕೆ ಆಕ್ಷೇಪ * ತೀರ್ಪು ಬರವಣಿಗೆ ಕುರಿತು ‘ಸುಪ್ರೀಂ’ನಿಂದ ನಿರ್ದೇಶನ
Published 20 ಆಗಸ್ಟ್ 2024, 23:17 IST
Last Updated 20 ಆಗಸ್ಟ್ 2024, 23:17 IST
ಅಕ್ಷರ ಗಾತ್ರ

ನವದೆಹಲಿ: ‘ಬಾಲಕಿಯರು ಲೈಂಗಿಕ ಬಯಕೆಗಳನ್ನು ಹತ್ತಿಕ್ಕಿಕೊಳ್ಳಬೇಕು’ ಎಂಬ ‘ಆಕ್ಷೇಪಾರ್ಹ ಸಲಹೆ’ಯನ್ನು ನೀಡಿ, ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿಯನ್ನು ಖುಲಾಸೆಗೊಳಿಸಿದ್ದ ಕಲ್ಕತ್ತ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ ವಜಾಮಾಡಿದೆ.

‘ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪೋಕ್ಸೊ ಕಾಯ್ದೆಯಡಿ ನಿಭಾಯಿಸುವ ಬಗ್ಗೆ ಸುಪ್ರಿಂ ಕೋರ್ಟ್‌ ಈಗಾಗಲೇ ಹಲವು ನಿರ್ದೇಶನಗಳನ್ನು ನೀಡಿದೆ’ ಎಂದೂ ನ್ಯಾಯಮೂರ್ತಿಗಳಾದ ಅಭಯ್‌ ಎಸ್. ಒಕಾ ಮತ್ತು ‌ಉಜ್ಜಲ್‌ ಭುಯಾನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಪೀಠದ ಪರವಾಗಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಅಭಯ್‌ ಎಸ್‌. ಒಕಾ ಅವರು, ‘ತೀರ್ಪು ಬರೆಯಬೇಕಾದ ಕ್ರಮ ಕುರಿತಂತೆಯೂ ಕೋರ್ಟ್‌ಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು. 

ಡಿಸೆಂಬರ್ 8ರಂದು ಈ ಪ್ರಕರಣ ವಿಚಾರಣೆಯ ವೇಳೆ ತೀರ್ಪನ್ನು ಕಟುವಾಗಿ ಟೀಕಿಸಿದ್ದ ಸುಪ್ರೀಂ ಕೋರ್ಟ್, ‘ಕಲ್ಕತ್ತ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಖಂಡನಾರ್ಹ ಮತ್ತು ಸಂಪೂರ್ಣವಾಗಿ ಅನಪೇಕ್ಷಿತವಾದುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.   

ತೀರ್ಪಿನಲ್ಲಿದ್ದ ಹೈಕೋರ್ಟ್‌ ವಿಭಾಗೀಯ ಪೀಠದ ಕೆಲ ಅಭಿಪ್ರಾಯಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ರಿಟ್‌ ಅರ್ಜಿ ದಾಖಲಿಸಿದ್ದ ಸುಪ್ರೀಂ ಕೋರ್ಟ್, ‘ತೀರ್ಪು ಬರೆಯುವಾಗ ನ್ಯಾಯಮೂರ್ತಿಗಳು ಉಪದೇಶ ನೀಡುವ ಅಗತ್ಯವಿಲ್ಲ’ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿತು.   

ಕಲ್ಕತ್ತ ಹೈಕೋರ್ಟ್‌ 2023ರ ಅ.18ರಂದು ನೀಡಿದ್ದ ತೀರ್ಪನ್ನು ಪಶ್ಚಿಮ ಬಂಗಾಳ ಸರ್ಕಾರವೂ ಪ್ರಶ್ನಿಸಿತ್ತು.

ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ‘ಬಾಲಕಿಯರು ಲೈಂಗಿಕ ಬಯಕೆಗಳನ್ನು ಹತ್ತಿಕ್ಕಿಕೊಳ್ಳಬೇಕು. ಕೇವಲ ಎರಡು ನಿಮಿಷ ಆಕೆ ಸುಖ ಪಟ್ಟರೂ, ಸಮಾಜದ ದೃಷ್ಟಿಯಲ್ಲಿ ಆಕೆ ಕಳೆದುಕೊಂಡವಳೇ ಆಗಿರುತ್ತಾಳೆ’ ಎಂದು ಅಭಿಪ್ರಾಯ ದಾಖಲಿಸಿತ್ತು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷ ಸಜೆ ವಿಧಿಸಿದ್ದ ಪ್ರಕರಣದ ಮೆಲ್ಮನವಿಯ ವಿಚಾರಣೆ ವೇಳೆ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೆ, ಇದೇ ಪ್ರಕರಣದಲ್ಲಿ ಅಪರಾಧಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು.

ಕಳೆದ ವರ್ಷ ಡಿ.8ರಂದು ಹೊರಡಿಸಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ‘ಮೇಲ್ನೋಟಕ್ಕೆ ಹೈಕೋರ್ಟ್‌ನ ಅಭಿಪ್ರಾಯಗಳು, ಸಂವಿಧಾನದ ವಿಧಿ 21ರಡಿ (ಬದುಕು ಮತ್ತು ವ್ಯಕ್ತಿಗತ ಸ್ವಾತಂತ್ರ್ಯ) ಬಾಲಕಿಯರಿಗೆ ಇರುವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ’ ಎಂದು ಹೇಳಿತ್ತು.  

ಹೈಕೋರ್ಟ್‌ನ ಮುಂದೆ ಇದ್ದುದು ಅಪರಾಧಿಗೆ ಶಿಕ್ಷೆ ವಿಧಿಸಿ ಕೆಳಹಂತದ ನ್ಯಾಯಾಲಯ ಸೆಪ್ಟೆಂಬರ್ 19/20ರಂದು ನೀಡಿದ್ದ ಆದೇಶದ ಸಿಂಧುತ್ವದ ಪ್ರಶ್ನೆಯಷ್ಟೇ. ಈ ಪ್ರಕರಣದಲ್ಲಿ ಅಪರಾಧಿಗೆ ಐಪಿಸಿ ಸೆಕ್ಷನ್‌ 363 (ಅಪಹರಣ), 366 (ಅಪಹರಣ, ಒತ್ತೆ, ಮದುವೆಯಾಗುವಂತೆ ಒತ್ತಡ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್‌ 6ರಡಿ ಶಿಕ್ಷೆಯನ್ನು ವಿಧಿಸಲಾಗಿತ್ತು. 

‘ತೀರ್ಪಿನಲ್ಲಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠದ ಅಭಿಪ್ರಾಯಗಳು, ಉಲ್ಲೇಖಗಳಿಂದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ಆದೇಶದಂತೆ ಸಂವಿಧಾನದ ವಿಧಿ 32ರ ಅನುಸಾರ ಸ್ವಯಂಪ್ರೇರಿತ ರಿಟ್‌ ದಾಖಲಿಸಲಾಗಿತ್ತು‘ ಎಂದು ಪೀಠ ಹೇಳಿತು.

‘ತೀರ್ಪಿನಲ್ಲಿ ಹೈಕೋರ್ಟ್‌ ಅನೇಕ ಅಪ್ರಸ್ತುತ ಅಂಶಗಳನ್ನು ಉಲ್ಲೇಖಿಸಿದೆ. ಮೇಲ್ನೋಟಕ್ಕೆ ಕಂಡುಬರುವಂತೆ ನಮ್ಮ ಪ್ರಕಾರ, ‘ತೀರ್ಪಿನಲ್ಲಿ ನ್ಯಾಯಮೂರ್ತಿಗಳು ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ಹೇಳಬಾರದು. ಉಪದೇಶವನ್ನೂ ನೀಡಬಾರದು’ ಎಂದು ಹೇಳಿತ್ತು.

ಕಲ್ಕತ್ತ ಹೈಕೋರ್ಟ್‌ ವಿಭಾಗೀಯ ಪೀಠದ ಆಕ್ಷೇಪಾರ್ಹ ಅಭಿಪ್ರಾಯಗಳು 20 ವರ್ಷ ಸಜೆ ವಿಧಿಸಿದ್ದ ಅಪರಾಧಿಯ ಖುಲಾಸೆಗೊಳಿಸಿದ್ದ ಹೈಕೋರ್ಟ್ ತೀರ್ಪಿನ ಅಭಿಪ್ರಾಯಗಳ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಬಂಗಾಳ ಸರ್ಕಾರ
‘ಹೈಕೋರ್ಟ್‌ ತೀರ್ಪಿನಲ್ಲಿರುವ ಕೆಲ ಪ್ಯಾರಾಗಳು ‘ಸಮಸ್ಯಾಸ್ಮತಕ’ವಾಗಿವೆ. ಇಂತಹ ತೀರ್ಪುಗಳನ್ನು ಬರೆಯುವುದು ‘ಖಂಡಿತವಾಗಿ ಸರಿಯಾದುದಲ್ಲ’.
(ಜ.4ರಂದು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯ)

ಕಲ್ಕತ್ತ ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿದ್ದೇನು?

ಹೈಕೋರ್ಟ್ ತನ್ನ ತೀರ್ಪಿನಲ್ಲಿ ‘ತನ್ನ ದೇಹದ ಸಮಗ್ರತೆಯ ಹಕ್ಕು ರಕ್ಷಿಸಿಕೊಳ್ಳುವುದು ಪ್ರತಿ ಬಾಲಕಿಯ ಹೊಣೆಗಾರಿಕೆ. ಲಿಂಗ ಆಧಾರಿತ ಅಡೆತಡೆ ಮೀರಿ ಸಮಗ್ರ ಅಭಿವೃದ್ಧಿಗೆ ಯತ್ನಿಸಬೇಕು. ತನ್ನ ಲೈಂಗಿಕ ಬಯಕೆ/ವಾಂಛೆಗಳನ್ನು ಹತ್ತಿಕ್ಕಿಕೊಳ್ಳಬೇಕು. ಎರಡು ನಿಮಿಷದ ಲೈಂಗಿಕ ಸುಖಕ್ಕಾಗಿ ಆಕೆ ಒಪ್ಪಿದರೂ ಸಮಾಜದ ದೃಷ್ಟಿಯಲ್ಲಿ ಆಕೆಯು ಕಳೆದುಕೊಂಡವಳು ಎಂದೇ ಗುರುತಿಸಲಾಗುತ್ತದೆ. ಆಕೆ ತನ್ನ ಖಾಸಗೀತನ ಹಾಗೂ ತನ್ನ ದೇಹದ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿತ್ತು. ಬಾಲಕಿಯರ ಅಥವಾ ಮಹಿಳೆಯರ ವ್ಯಕ್ತಿತ್ವ ಘನತೆ ಖಾಸಗೀತನವನ್ನು ಗೌರವಿಸುವುದು ಬಾಲಕರ ಕರ್ತವ್ಯ. ಬಾಲಕರು ತಮ್ಮ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT