ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಂಗ್‌ಸ್ಟರ್ ಅತೀಕ್ ಬರೆದಿದ್ದ ಪತ್ರ: ಸಿಜೆಐ, ಮುಖ್ಯಮಂತ್ರಿ ಯೋಗಿಗೆ ರವಾನೆ

Last Updated 19 ಏಪ್ರಿಲ್ 2023, 7:17 IST
ಅಕ್ಷರ ಗಾತ್ರ

ಪ್ರಯಾಗರಾಜ್‌: ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ತಲುಪಿಸುವಂತೆ ಸೂಚಿಸಿ, ನನ್ನ ಕಕ್ಷಿದಾರ ಬರೆದಿದ್ದ ಪತ್ರವನ್ನು ಈ ಇಬ್ಬರಿಗೆ ಕಳುಹಿಸಲಾಗುತ್ತಿದೆ’ ಎಂದು ಪಾತಕಿ ಹಾಗೂ ಮಾಜಿ ಸಂಸದ ಅತೀಕ್‌ ಅಹ್ಮದ್‌ ಪರ ವಕೀಲ ವಿಜಯ್‌ ಮಿಶ್ರಾ ಮಂಗಳವಾರ ಹೇಳಿದ್ದಾರೆ.

‘ಒಂದು ಪಕ್ಷ ಏನಾದರೂ ಅವಘಡ ಸಂಭವಿಸಿದರೆ ಅಥವಾ ನನ್ನ ಕೊಲೆಯಾದರೆ, ಲಕೋಟೆಯಲ್ಲಿರುವ ಪತ್ರವನ್ನು ಸಿಜೆಐ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ತಲುಪಿಸಬೇಕು ಎಂಬುದಾಗಿ ಅತೀಕ್‌ ಹೇಳಿದ್ದ’ ಎಂದು ಮಿಶ್ರಾ ತಿಳಿಸಿದ್ದಾರೆ.

‘ಮುಚ್ಚಿದ ಲಕೋಟೆಯಲ್ಲಿರುವ ಈ ಪತ್ರ ನನ್ನ ಬಳಿ ಇಲ್ಲ ಹಾಗೂ ನಾನು ಕಳಿಸಿಯೂ ಇಲ್ಲ. ಇದನ್ನು ಯಾವುದೋ ಸ್ಥಳದಲ್ಲಿ ಇಡಲಾಗಿದ್ದು, ಮತ್ತೊಬ್ಬ ವ್ಯಕ್ತಿ ಕಳುಹಿಸುತ್ತಿದ್ದಾರೆ. ಪತ್ರದಲ್ಲಿ ಏನಿದೆ ಎಂಬುದು ಸಹ ನನಗೆ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಸ್ವತಂತ್ರ ತನಿಖೆ ಕೋರಿದ ಅರ್ಜಿ ವಿಚಾರಣೆ 24ಕ್ಕೆ
ಅತೀಕ್‌ , ಅಶ್ರಫ್ ಹತ್ಯೆ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 24ರಂದು ನಡೆಸಲು ಸುಪ‍್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. ಈ ಸಂಬಂಧ, ವಕೀಲ ವಿಶಾಲ್‌ ತಿವಾರಿ ಅರ್ಜಿ ಸಲ್ಲಿಸಿದ್ದರು.

‘ಅತೀಕ್‌ ಅಹ್ಮದ್‌ ಹಾಗೂ ಅಶ್ರಫ್‌ ಹತ್ಯೆ ಕುರಿತು ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ 2017ರಿಂದ ಇಲ್ಲಿಯವರೆಗೆ 183 ಎನ್‌ಕೌಂಟರ್‌ಗಳು ನಡೆದಿದ್ದು, ಅವುಗಳ ಬಗ್ಗೆಯೂ ತನಿಖೆಗೆ ಆದೇಶಿಸಬೇಕು’ ಎಂದು ವಕೀಲ ತಿವಾರಿ ಕೋರಿದ್ದರು.

ಪ್ರಯಾಗರಾಜ್‌: ಇಂಟರ್‌ನೆಟ್‌ ಸೇವೆ ಮತ್ತೆ ಆರಂಭ
ಪಾತಕಿ–ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಹತ್ಯೆ ನಂತರ ಪ್ರಯಾಗರಾಜ್‌ ನಗರದಲ್ಲಿ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್‌ ಸೇವೆಗಳನ್ನು ಮತ್ತೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

‘ಭಾನುವಾರ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್‌ ಸೇವೆಗಳನ್ನು ಸೋಮವಾರ ತಡರಾತ್ರಿಯೇ ಪುನಃ ಆರಂಭಿಸಲಾಗಿದೆ. ಜನಜೀವನ ಸಹಜಸ್ಥಿತಿಗೆ ಬಂದಿದೆ’ ಎಂದು ಜಿಲ್ಲಾಧಿಕಾರಿ ಸಂಜಯಕುಮಾರ್‌ ಖತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT