ನವದೆಹಲಿ: ಚುನಾವಣಾ ಬಾಂಡ್ ಯೋಜನೆ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ಸಂವಿಧಾನದ 32ನೇ ವಿಧಿಯಡಿ ಈ ಹಂತದಲ್ಲಿ ಮಧ್ಯ ಪ್ರವೇಶಿಸುವುದು ಸೂಕ್ತವಲ್ಲ ಎಂದಿದೆ.
ಚುನಾವಣಾ ಬಾಂಡ್‌ಗಳ ಖರೀದಿ ಬಗ್ಗೆ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದೂ ಹೇಳಿದೆ.
‘ಈ ಯೋಜನೆ ಕುರಿತಂತೆ ನ್ಯಾಯಾಂಗ ಪರಿಶೀಲನೆಗಾಗಿ ಅರ್ಜಿಯನ್ನು ಸ್ವೀಕರಿಸಲಾಗಿತ್ತು. ಆದರೆ ಕಾನೂನಿನಡಿ ಪರಿಹಾರ ಲಭ್ಯವಿರುವಾಗ, ಕ್ರಿಮಿನಲ್ ತಪ್ಪು ಪ್ರಕರಣಗಳು ಸಂವಿಧಾನದ 32ನೇ ವಿಧಿಯಡಿ ಇರಬಾರದು’ ಎಂದು ನ್ಯಾಯಪೀಠ ತಿಳಿಸಿದೆ.
ಸ್ವಯಂ ಸೇವಾ ಸಂಘಟನೆಗಳಾದ ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ (ಸಿಪಿಐಎಲ್) ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು, ವಿವಿಧ ಸಂಸ್ಥೆಗಳು ಹಾಗೂ ತನಿಖಾ ಸಂಸ್ಥೆಗಳ ನಡುವೆ ‘ಕೊಡು–ಕೊಳ್ಳುವಿಕೆಯ ವ್ಯವಹಾರ’ ನಡೆದಿರಬಹುದು ಎಂದು ಅರ್ಜಿಯಲ್ಲಿ ದೂರಲಾಗಿತ್ತು.