ತಿರುವನಂತಪುರ: ‘ವಿಪತ್ತು ಪೀಡಿತ ವಯನಾಡಿನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಕೊನೆಯ ಹಂತ ತಲುಪಿದ್ದು, ನಾಪತ್ತೆಯಾದ 206 ಜನರ ಸುಳಿವು ಸಿಕ್ಕಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಾಲಿಯಾರ್ ನದಿಯಲ್ಲಿ ಪತ್ತೆಯಾದ ಮೃತದೇಹಗಳು ಮತ್ತು ದೇಹ ಭಾಗಗಳ ಗುರುತು ಪತ್ತೆ ಹೆಚ್ಚುವುದೇ ಅತ್ಯಂತ ಕಷ್ಟದ ಕೆಲಸವಾಗಿದೆ’ ಎಂದರು.
‘87 ಮಹಿಳೆಯರು, 98 ಪುರುಷರ ಮತ್ತು 30 ಮಕ್ಕಳು ಸೇರಿ ಇಲ್ಲಿಯವರೆಗೆ 215 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.148 ಮೃತದೇಹಗಳನ್ನು ಸಂಬಂಧಿಸಿದ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. 206 ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. 81 ಜನರು ಗಾಯಗೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.
‘67 ಮೃತದೇಹಗಳ ಗುರುತು ಪತ್ತೆ ಮಾಡಬೇಕಿದ್ದು, ಪಂಚಾಯತ್‌ಗಳು ಅಂತಿಮ ವಿಧಿ ವಿಧಾನಗಳನ್ನು ಮಾಡಲಿವೆ’ ಎಂದರು.
‘ಶೋಧ ಕಾರ್ಯಾಚರಣೆಯೂ ಮುಂದುವರಿದಿದ್ದು, ಅಗ್ನಿ ಶಾಮಕ ದಳ, ಎನ್‌ಡಿಆರ್‌ಎಫ್, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಭಾರತೀಯ ಸೇನೆಯ 1,419 ಸಿಬ್ಬಂದಿ ಮತ್ತು ತಮಿಳುನಾಡಿನಿಂದ ಬಂದ ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಹೇಳಿದರು.
‘ಕೆ–19 ಸ್ಕ್ಯಾಡ್ ಮತ್ತು ತಮಿಳುನಾಡಿನ ವೈದ್ಯಕೀಯ ತಂಡವೂ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಹ್ಯೂಮನ್ ರೆಸ್ಕ್ಯೂ ರೆಡಾರ್ ಮತ್ತು ಡ್ರೋನ್ ಆಧಾರಿತ ರೆಡಾರ್‌ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ’ ಎಂದು ಹೇಳಿದರು.
ಪುನರ್ವಸತಿ ಕುರಿತಂತೆ ಮಾಹಿತಿ ನೀಡಿದ ವಿಜಯನ್, ‘ಸುರಕ್ಷಿತ ಸ್ಥಳ ಗುರುತಿಸಿ, ಪುನರ್ವಸತಿ ಕಲ್ಪಿಸಲಾಗುತ್ತದೆ’ ಎಂದರು.
ಮುಂದುವರಿದು, ‘ದುರಂತದಲ್ಲಿ ಹಾನಿಗೊಳಗಾಗಿರುವ ಶಾಲೆಗಳಿಗೆ ಶಿಕ್ಷಣ ಸಚಿವರು ಭೇಟಿ ನೀಡಲಿದ್ದು, ಮಕ್ಕಳ ಶೈಕ್ಷಣಿಕ ಅಭ್ಯಾಸಗಳಿಗೆ ತೊಡಕಾಗದಂತೆ ಎಚ್ಚರವಹಿಸಲಾತ್ತದೆ’ ಎಂದರು.
‘ತಾತ್ಕಾಲಿಕ ಸೇತುವೆ ಮತ್ತು ಝೀಪ್ ಲೈನ್‌ಗಳನ್ನು ಬಳಸಿ ಸುಮಾರು 1,000 ಜನರನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹೆಲಿಪ್ಯಾಡ್‌ಗಳನ್ನು ನಿರ್ಮಿಸಿ ಆಹಾರ ಪೂರೈಸುವ ಮೂಲಕ ಉರಾಲುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ ಗಣನೀಯ ಕೊಡುಗೆ ನೀಡಿದೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಜಾಗತಿಕವಾಗಿ ಹಲವಾರು ಜನ ದುರಂತಕ್ಕೆ ಮಿಡಿದಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಮಾಡುವಂತೆ ಕೋರಿ ನಮ್ಮ ಸರ್ಕಾರ ‘ಹೆಲ್ಪ್ ಫಾರ್ ವಯನಾಡು ಸೆಲ್’ ಸ್ಥಾಪಿಸಿದೆ. ಇ–ಮೇಲ್ ಐಡಿ helpforwayanad@kerala.gov.in ಅಥವಾ 9188940013, 9188940014, 9188940015 ಕರೆ ಮಾಡುವ ಮೂಲಕ ದೇಣಿಗೆ ನೀಡಬಹುದು’ ಇದೇ ವೇಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.