ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಥಿಲ್ ಬಂಧಿಸುವಾಗ ಕೆಟ್ಟದಾಗಿ ನಡೆಸಿಕೊಂಡ ಇ.ಡಿ; ತಮಿಳುನಾಡು ಮಾನವ ಹಕ್ಕುಗಳ ಆಯೋಗ

‘ಆಯೋಗದ ಹೇಳಿಕೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿಕೆ
Published 15 ಜೂನ್ 2023, 14:38 IST
Last Updated 15 ಜೂನ್ 2023, 14:38 IST
ಅಕ್ಷರ ಗಾತ್ರ

ಚೆನ್ನೈ: ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ), ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

‘ಇ.ಡಿ ಅಧಿಕಾರಿಗಳು ಸಚಿವರನ್ನು ಬಂಧಿಸುವಾಗ ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ನೀಡಿರುವ ಹೇಳಿಕೆಯನ್ನು ಪರಿಶೀಲಿಸಲಾಗುವುದು’ ಎಂದಿದ್ದಾರೆ.

‘ಜನ ವಿರೋಧಿ ರಾಜಕಾರಣದಲ್ಲಿ ನಿರತವಾಗಿರುವ ಬಿಜೆಪಿ ಪಕ್ಷದ ನಾಯಕತ್ವವು, ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ರಾಜಕಾರಣ ಮಾಡುತ್ತಿದೆ’ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಗುರುವಾರ ವಿಡಿಯೊವೊಂದನ್ನು ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ, ‘ಇ.ಡಿ ಅಧಿಕಾರಿಗಳು ಬಂಧಿಸುವಾಗಲೇ ಬಾಲಾಜಿ ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಜೊತೆಗೆ ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು’ ಎಂದಿದ್ದಾರೆ.

‘ಸೆಂಥಿಲ್‌ಗೆ ಇ.ಡಿ ನೀಡುತ್ತಿರುವ ತೊಂದರೆ ನಿಮಗೆಲ್ಲರಿಗೂ ಗೊತ್ತಿದೆ. ಇದು ಸೇಡಿನ ರಾಜಕಾರಣವಲ್ಲದೆ ಮತ್ತೇನೂ ಅಲ್ಲ. ಐದು ಬಾರಿ ಶಾಸಕ, ಎರಡು ಬಾರಿ ಸಚಿವರಾದವರು ತಪ್ಪಿಸಿಕೊಂಡು ಪಲಾಯನ ಆಗುತ್ತಿದ್ದರೆ’ ಎಂದು ಸ್ಟಾಲಿನ್‌ ಪ್ರಶ್ನಿಸಿದ್ದಾರೆ.

‘ಭಯೋತ್ಪಾದಕರ ಹಾಗೆ ಬಂಧಿಸುವ ಅವಶ್ಯಕತೆ ಏನಿತ್ತು? 18 ತಾಸು ವಿಚಾರಣೆಗೆ ಸಹಕರಿಸಿದ್ದರೂ; ಯಾರೊಬ್ಬರ ಭೇಟಿಗೂ ಅವಕಾಶ ಕೊಟ್ಟಿಲ್ಲ. ಈ ವೇಳೆಯೇ ಬಾಲಾಜಿ ಎದೆನೋವಿನಿಂದ ಬಳಲಿದರು’ ಎಂದಿದ್ದಾರೆ.

ಅನುಮತಿ: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಾಜಿ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಮದ್ರಾಸ್ ಹೈಕೋರ್ಟ್‌ ಗುರುವಾರ ಅನುಮತಿ ನೀಡಿದೆ.

ಬಾಲಾಜಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

‘ಸೆಂಥಿಲ್‌ ಅವರನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿದೆ’ ಎಂಬ ದೂರಿಗೆ ಸಂಬಂಧಿಸಿದಂತೆ ಪೀಠ ಇ.ಡಿ ಗೆ ನೋಟಿಸ್ ಜಾರಿಗೊಳಿಸಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.

‘ಬಾಲಾಜಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಇ.ಡಿ ಸಹ ತನ್ನ ವೈದ್ಯರ ತಂಡದ ಮೂಲಕ ಸಚಿವರ ಆರೋಗ್ಯ ಪರೀಕ್ಷಿಸಬಹುದು’ ಎಂದು ವಿಭಾಗೀಯ ಪೀಠ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

‘ಕೆಟ್ಟದಾಗಿ ನಡೆಸಿಕೊಂಡಿರುವ ಇ.ಡಿ’

‘ಸೆಂಥಿಲ್ ಬಂಧಿಸುವಾಗ ಇ.ಡಿ ಅಧಿಕಾರಿಗಳು ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ’ ಎಂದು ತಮಿಳುನಾಡು ಮಾನವ ಹಕ್ಕುಗಳ ಆಯೋಗದ ಸದಸ್ಯ ಕಣ್ಣದಾಸನ್ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು ‘ಬಂಧನದ ವೇಳೆ ಬಾಲಾಜಿ ತಲೆಗೆ ಗಾಯವಾಗಿದೆ’ ಎಂದು ಹೇಳಿದರು. ‘ಸಚಿವರಿಗಾಗಿರುವ ಗಾಯದ ಬಗ್ಗೆ ವೈದ್ಯರು ದೃಢಪಡಿಸಬೇಕು. ಆಯೋಗ ಇದರ ಬಗ್ಗೆ ಪರಿಶೀಲಿಸಲಿದೆ’ ಎಂದರು. ಕಣ್ಣದಾಸನ್ ಸೆಂಥಿಲ್‌ ಭೇಟಿಯಾಗಿದ್ದಕ್ಕೆ ಎಐಎಡಿಎಂಕೆಯ ಮಾಜಿ ಶಾಸಕ ಇನ್ಬದೊರೈ ವಿರೋಧ ವ್ಯಕ್ತಪಡಿಸಿದ್ದಾರೆ. ‘ಮಾನವ ಹಕ್ಕುಗಳ ಆಯೋಗದ ಸದಸ್ಯರ ಭೇಟಿಯನ್ನು ನಾವು ವಿರೋಧಿಸಲ್ಲ. ಆದರೆ ಇದಕ್ಕೆ ಕಣ್ಣದಾಸನ್ ನಿಯೋಜಿಸಿದ್ದು ತಪ್ಪು. ಡಿಎಂಕೆ ಪರ ಒಲವುಳ್ಳ ವ್ಯಕ್ತಿ ಇವರು. ವ್ಯಕ್ತಿಯೊಬ್ಬ ತನ್ನ ಪ್ರಕರಣದ ತೀರ್ಪನ್ನು ತಾನೇ ಕೊಟ್ಟುಕೊಂಡಂತಾಗಿದೆ. ಇದನ್ನು ಪ್ರತ್ಯೇಕವಾಗಿ ಪ್ರಶ್ನಿಸಲಿದ್ದೇವೆ’ ಎಂದಿದ್ದಾರೆ.

ಸೆಂಥಿಲ್‌ ವಜಾಗೆ ಆಗ್ರಹ

ಇ.ಡಿ ಯಿಂದ ಬಂಧನಕ್ಕೆ ಒಳಗಾಗಿರುವ ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಐಎಡಿಎಂಕೆ ಪಕ್ಷದ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ರಾಜ್ಯಪಾಲ ಆರ್‌.ಎನ್‌.ರವಿ ಅವರನ್ನು ಗುರುವಾರ ಭೇಟಿ ಮಾಡಿದ ಸಂಸದ ಸಿ.ವಿ.ಷಣ್ಮುಗಂ ನೇತೃತ್ವದ ನಿಯೋಗ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸಹಿಯುಳ್ಳ ಮನವಿ ಪತ್ರವನ್ನು ನೀಡಿತು. ‘ಸೆಂಥಿಲ್ ಬಂಧನವನ್ನು ಡಿಎಂಕೆ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ. ಆದರೆ ಬಾಲಾಜಿ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದು ಷಣ್ಮುಗಂ ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT