ನವದೆಹಲಿ: ಶುಕ್ರವಾರ ಹ್ಯಾಕ್ ಆಗಿದ್ದ ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಸೇವೆಯು ಇದೀಗ ಪುನರಾರಂಭವಾಗಿದೆ.
ಈ ಕುರಿತು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಶುಕ್ರವಾರ ಮಾಹಿತಿ ನೀಡಿರುವ ಸುಪ್ರೀಂ ಕೋರ್ಟ್ ‘ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಇದೀಗ ಮತ್ತೆ ಪುನರಾರಂಭವಾಗಿದೆ ಎಂದು ಈ ಮೂಲಕ ಎಲ್ಲರಿಗೂ ತಿಳಿಸಲಾಗುತ್ತಿದೆ’ ಎಂದು ಹೇಳಿದೆ.
ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಅನ್ನು ಶುಕ್ರವಾರ ಹ್ಯಾಕ್ ಮಾಡಲಾಗಿತ್ತು. ಅದರ ಚಾನೆಲ್‌ನಲ್ಲಿ ಅಮೆರಿಕ ಮೂಲದ ರಿಪ್ಪಲ್ ಲ್ಯಾಬ್ಸ್ ಎಂಬ ಕಂಪನಿ ಅಭಿವೃದ್ಧಿಪಡಿಸಿದ ಕ್ರಿಪ್ಟೊಕರೆನ್ಸಿಯ ವಿಡಿಯೊಗಳು ಪ್ರಸಾರವಾಗಿದ್ದವು.
ಬಳಿಕ ಚಾನೆಲ್ ಹ್ಯಾಕ್ ಆಗಿರುವ ಬಗ್ಗೆ ದೃಢಪಡಿಸಿದ ಕೋರ್ಟ್, ‘ಶೀಘ್ರವೇ ಚಾನೆಲ್ ಸೇವೆಯನ್ನು ಆರಂಭಿಸಲಾಗುತ್ತದೆ’ ಎಂದು ತನ್ನ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿತ್ತು.
ಸಂವಿಧಾನ ಪೀಠಗಳ ಮುಂದಿರುವ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕಾಗಿ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಬಳಸುತ್ತಿದೆ.