ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟಿಐ ಅಧ್ಯಕ್ಷರಾಗಿ ಟಿಪಿಎಂಎಲ್‌ ನಿರ್ದೇಶಕ ಕೆ.ಎನ್.ಶಾಂತಕುಮಾರ್ ಆಯ್ಕೆ

Published 29 ಸೆಪ್ಟೆಂಬರ್ 2023, 11:35 IST
Last Updated 29 ಸೆಪ್ಟೆಂಬರ್ 2023, 13:15 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಪ್ರಕಾಶನ ಸಂಸ್ಥೆಯಾಗಿರುವ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕ ಕೆ.ಎನ್. ಶಾಂತಕುಮಾರ್ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸುದ್ದಿಸಂಸ್ಥೆಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಶುಕ್ರವಾರ ಆಯ್ಕೆ ಆಗಿದ್ದಾರೆ.

ಸುದ್ದಿಸಂಸ್ಥೆಯ ವಾರ್ಷಿಕ ಮಹಾಸಭೆಯ ನಂತರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಶಾಂತಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಹಿಂದುಸ್ಥಾನ್ ಟೈಮ್ಸ್‌ನ ಸಿಇಒ ಪ್ರವೀಣ್ ಸೋಮೇಶ್ವರ್ ಅವರು ಪಿಟಿಐ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶಾಂತಕುಮಾರ್ ಅವರಿಗೂ ಮೊದಲು ಅವೀಕ್ ಸರ್ಕಾರ್ ಅವರು ಸತತ ಎರಡು ಅವಧಿಗಳಿಗೆ ಪಿಟಿಐ ಅಧ್ಯಕ್ಷರಾಗಿದ್ದರು.

‘ಪಿಟಿಐ ಸಂಸ್ಥೆಯ ಪಾಲಿಗೆ ಇದು ಪರ್ವಕಾಲ. ಅದರಲ್ಲೂ ಮುಖ್ಯವಾಗಿ ವಿಡಿಯೊ ಸೇವೆಗಳನ್ನು ಈಚೆಗೆ ಆರಂಭಿಸಿದ ನಂತರದಲ್ಲಿ ಅದು ಪರಿವರ್ತನೆಯ ಹಾದಿಯಲ್ಲಿದೆ. ಈ ಹೊತ್ತಿನಲ್ಲಿ ಪಿಟಿಐ ಅಧ್ಯಕ್ಷನಾಗಿರುವುದು ನನ್ನ ಸುಯೋಗ’ ಎಂದು ಶಾಂತಕುಮಾರ್ ಅವರು ಹೇಳಿದ್ದಾರೆ.

ಶಾಂತಕುಮಾರ್ ಅವರು ದಿ ಪ್ರಿಂಟರ್ಸ್‌ (ಮೈಸೂರು) ಪ್ರೈ.ಲಿ. ಕಂಪನಿಯ ಆಡಳಿತದಲ್ಲಿ 1983ರಿಂದಲೂ ತೊಡಗಿಸಿಕೊಂಡಿದ್ದಾರೆ. ಅವರು ಆಡಿಟ್ ಬ್ಯೂರೊ ಆಫ್‌ ಸರ್ಕ್ಯುಲೇಷನ್‌ನ (ಎಬಿಸಿ) ಅಧ್ಯಕ್ಷರಾಗಿ, ಭಾರತೀಯ ವೃತ್ತಪತ್ರಿಕಾ ಸಂಘದ (ಐಎನ್‌ಎಸ್‌) ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಅವರು 2013ರಿಂದ 2014ರವರೆಗೆ ಕೂಡ ಪಿಟಿಐ ಅಧ್ಯಕ್ಷರಾಗಿದ್ದರು.

‘ಶಾಂತಕುಮಾರ್‌ ಅವರಂತಹ ಸಾಮರ್ಥ್ಯವುಳ್ಳವರು ಅಧ್ಯಕ್ಷ ಸ್ಥಾನದಲ್ಲಿರುವುದು ಅದೃಷ್ಟ. ಸಾಂಪ್ರದಾಯಿಕ ವೃತ್ತಪತ್ರಿಕೆಗಳ ವ್ಯವಹಾರ ಮತ್ತು ಹೊಸ ಕಾಲದ ಡಿಜಿಟಲ್ ಸುದ್ದಿಮನೆ ವ್ಯವಸ್ಥೆ ಬಗ್ಗೆ ಅವರು ಹೊಂದಿರುವ ಅರಿವು ನಮ್ಮ ಸುದ್ದಿಸಂಸ್ಥೆಗೆ ಅಪಾರ ಪ್ರಯೋಜನ ತಂದುಕೊಡಲಿದೆ’ ಎಂದು ಪಿಟಿಐ ಪ್ರಧಾನ ಸಂಪಾದಕ ಹಾಗೂ ಸಿಇಒ ವಿಜಯ್ ಜೋಷಿ ಹೇಳಿದ್ದಾರೆ.

ಪಿಟಿಐ ನಿರ್ದೇಶಕ ಮಂಡಳಿಯ ಇತರ ಸದಸ್ಯರು: ವಿಜಯ್ ಕುಮಾರ್ ಚೋಪ್ರಾ (ಪಂಜಾಬ್ ಕೇಸರಿ), ವಿನೀತ್ ಜೈನ್ (ಟೈಮ್ಸ್ ಆಫ್ ಇಂಡಿಯಾ), ಎನ್. ರವಿ (ದಿ ಹಿಂದೂ), ವಿವೇಕ್ ಗೋಯಂಕಾ (ಎಕ್ಸ್‌ಪ್ರೆಸ್‌ ಸಮೂಹ), ಮಹೇಂದ್ರ ಮೋಹನ್ ಗುಪ್ತ (ದೈನಿಕ್ ಜಾಗರಣ್), ರಿಯಾದ್ ಮ್ಯಾಥ್ಯೂ (ಮಲಯಾಳ ಮನೋರಮ), ಎಂ.ವಿ. ಶ್ರೇಯಾಂಸ್ ಕುಮಾರ್ (ಮಾತೃಭೂಮಿ).

ಎಲ್‌. ಆದಿಮೂಲಂ (ದಿನಮಲಾರ್), ಹೊರ್ಮುಸ್ಜಿ ಎನ್. ಕಾಮಾ (ಬಾಂಬೆ ಸಮಾಚಾರ್), ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ದೀಪಕ್ ನಯ್ಯರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಹಿರಿಯ ಪತ್ರಕರ್ತ ಟಿ.ಎನ್. ನೈನನ್ ಮತ್ತು ಟಾಟಾ ಸನ್ಸ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಗೋಪಾಲಕೃಷ್ಣನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT