ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ | ಲೋಕಸಭೆಯಲ್ಲಿ ಕಳಪೆ ಸಾಧನೆ: ಡಿಸಿಎಂ ಜತೆ ಸಿಎಂ ಶಿಂದೆ ಚರ್ಚೆ

Published 18 ಜೂನ್ 2024, 6:27 IST
Last Updated 18 ಜೂನ್ 2024, 6:27 IST
ಅಕ್ಷರ ಗಾತ್ರ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿ ಪಕ್ಷಗಳ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ನಿಖರ ವಿವರಗಳು ಲಭ್ಯವಾಗಿಲ್ಲ. ಸೋಮವಾರ ತಡರಾತ್ರಿವರೆಗೂ ಸಭೆ ಮುಂದುವರಿದಿದೆ. ಇದಾದ ಬಳಿಕ ರಾಜ್ಯದ ಬಿಜೆಪಿ ನಾಯಕರು ಪರಿಶೀಲನಾ ಸಭೆಗಾಗಿ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಅಧಿಕೃತ ನಿವಾಸದಲ್ಲಿ ಸಭೆ ನಡೆದಿದೆ. ಪವಾರ್ ತೆರಳಿದ ಬಳಿಕ ಫಡಣವೀಸ್ ಅವರೊಂದಿಗೆ ಶಿಂದೆ ಚರ್ಚೆ ಮುಂದುವರಿಸಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣಾ ಫಲಿತಾಂಶ ತೀವ್ರ ಹೊಡೆತ ನೀಡಿದೆ. ಪಕ್ಷದ ಸಾಧನೆಗೆ ಸಂಬಂಧಿಸಿದಂತೆ ಬಿಜೆಪಿಯ ಕೇಂದ್ರ ನೇತೃತ್ವವು ರಾಜ್ಯ ನಾಯಕರೊಂದಿಗೆ ಪರಿಶೀಲನಾ ಸಭೆ ಕರೆದಿದೆ.

ರಾಜ್ಯ ನಾಯಕರೊಂದಿಗೆ ಸಭೆ ನಡೆಸುವುದು ವಾಡಿಕೆಯಾಗಿದೆ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ರಾಜೀನಾಮೆಗೆ ಫಡಣವೀಸ್ ಮುಂದಾಗಿದ್ದರು. ವಿಧಾನಸಭೆ ಚುನಾವಣೆವರೆಗೂ ಪಕ್ಷಕ್ಕಾಗಿ ದುಡಿಯುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಕುರಿತು ದೆಹಲಿಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಬಿಜೆಪಿ ಘಟಕದ ಉಸ್ತುವಾರಿಯನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರಿಗೆ ವಹಿಸಲಾಗಿದೆ. ಅಶ್ವಿನಿ ವೈಷ್ಣವ್ ಸಹ ಪ್ರಭಾರಿ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ.

48 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ (ಶಿಂದೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಪವಾರ್) ಮೈತ್ರಿ ಪಕ್ಷಗಳು 17 ಸ್ಥಾನಗಳಲ್ಲಿ ಜಯಿಸಿತ್ತು. ಬಿಜೆಪಿಗೆ 9, ಶಿವಸೇನಾ 7 ಹಾಗೂ ಎನ್‌ಸಿಪಿಗೆ 1 ಸ್ಥಾನ ದೊರಕಿತ್ತು.

ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಪ್ ಆಘಾಡಿಯು 30 ಸ್ಥಾನಗಳಲ್ಲಿ ಜಯಭೇರಿ ಗಳಿಸಿದೆ. ಕಾಂಗ್ರೆಸ್, ಶಿವಸೇನಾ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ ಶರದ್ ಪವಾರ್ ಬಣಗಳು ಪ್ರಮುಖ ಪ್ರಕ್ಷಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT