ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಕ್ಕಿಂ ಮೇಘಸ್ಫೋಟದ ಪರಿಣಾಮ ಪಶ್ಚಿಮ ಬಂಗಾಳದಲ್ಲೂ ಪ್ರವಾಹ: 10 ಸಾವಿರ ಜನರ ರಕ್ಷಣೆ

Published 5 ಅಕ್ಟೋಬರ್ 2023, 4:17 IST
Last Updated 5 ಅಕ್ಟೋಬರ್ 2023, 4:17 IST
ಅಕ್ಷರ ಗಾತ್ರ

ಕೋಲ್ಕತ್ತ: ಸಿಕ್ಕಿಂನಲ್ಲಿ ಸಂಭವಿಸಿರುವ ಮೇಘಸ್ಫೋಟದ ಪರಿಣಾಮ ಪಶ್ಚಿಮ ಬಂಗಾಳದಲ್ಲಿಯೂ ಆಗಿದೆ. ಉಭಯ ರಾಜ್ಯಗಳ ಗಡಿಯಲ್ಲಿರುವ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಈಗಾಗಲೇ 10,000 ಜನರನ್ನು ರಕ್ಷಿಸಲಾಗಿದ್ದು, 9 ಜಿಲ್ಲೆಗಳಲ್ಲಿ ತೆರೆದಿರುವ 190 ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬ್ಯಾನರ್ಜಿ ಅವರು, ಮನೆಯಿಂದಲೇ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಪ್ರವಾಹ ಪರಿಸ್ಥಿತಿಯ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರದ ನೌಕರರ ರಜೆಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ.

ರಾಜ್ಯದ ಉತ್ತರ ಭಾಗದಲ್ಲಿನ ಪ್ರವಾಹಪೀಡಿತ ಜಿಲ್ಲೆಗಳಿಗೆ ಪಶ್ಚಿಮ ಬಂಗಾಳ ಗವರ್ನರ್‌ ಸಿ.ವಿ.ಆನಂದ ಬೋಸ್‌ ಇಂದು (ಗುರುವಾರ) ಭೇಟಿ ನೀಡಲಿದ್ದಾರೆ.

ಸಿಕ್ಕಿಂನಲ್ಲಿ ಬುಧವಾರ ಸಂಭವಿಸಿದ ಮೇಘಸ್ಫೋಟದಿಂದ ತೀಸ್ತಾ ನದಿಯಲ್ಲಿ ದಿಢೀರ್‌ ಪ್ರವಾಹ ಉಂಟಾಗಿ ಕನಿಷ್ಠ 14 ಮಂದಿ ಮೃತಪಟ್ಟು 80ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಪರಿಣಾಮ ಬಂಗಾಳದ ಮೇಲೂ ಆಗಿದೆ.

ಪ್ರವಾಹ ಸ್ಥಿತಿಯ ಮಾಹಿತಿ ಪಡೆದಿರುವ ಬ್ಯಾನರ್ಜಿ, ಪ್ರವಾಹಪೀಡಿತ ಸ್ಥಳಗಳಿಗೆ ಹಿರಿಯ ಅಧಿಕಾರಿಗಳ ತಂಡವನ್ನು ಕೂಡಲೇ ಕಳುಹಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಎಚ್‌.ಕೆ.ದ್ವಿವೇದಿ ಹಾಗೂ ಗೃಹ ಕಾರ್ಯದರ್ಶಿ ಬಿ.ಪಿ.ಗೋಪಾಲಿಕಾ ಅವರಿಗೆ ಸೂಚಿಸಿದ್ದಾರೆ.

'ತಗ್ಗು ಪ್ರದೇಶದ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸುಮಾರು 10,000 ಜನರನ್ನು ಈಗಾಗಲೇ ರಕ್ಷಿಸಿದ್ದೇವೆ. ರಾಜ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್) ಸ್ಥಳಕ್ಕೆ ಧಾವಿಸಿವೆ. ನನ್ನ ಕಾಲಿನ ಗಾಯ ಸಂಪೂರ್ಣವಾಗಿ ವಾಸಿಯಾಗಲು ಇನ್ನೂ ಒಂದು ವಾರ ಬೇಕಿದ್ದು, ಮನೆಯಿಂದಲೇ 24/7 ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲಿದ್ದೇನೆ' ಎಂದು ಮಮತಾ ತಿಳಿಸಿದ್ದಾರೆ.

ಸಂತ್ರಸ್ತರು ದೂರು ದಾಖಲಿಸಲು ಕಂಟ್ರೋಲ್‌ ರೂಂ ತೆರೆಯುವಂತೆಯೂ ದ್ವಿವೇದಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT