ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಕೇರ್ ನಕ್ಸಲ್ ಎನ್‌ಕೌಂಟರ್‌: ಮನೆ ಮಾಡಿದ ಮೌನ

Published 17 ಏಪ್ರಿಲ್ 2024, 21:03 IST
Last Updated 17 ಏಪ್ರಿಲ್ 2024, 21:03 IST
ಅಕ್ಷರ ಗಾತ್ರ

ಕಾಂಕೇರ್: ಭದ್ರತಾ ಪಡೆಗಳ ಜೊತೆಗಿನ ಎನ್‌ಕೌಂಟರ್‌ನಲ್ಲಿ 29 ನಕ್ಸಲೀಯರ ಹತ್ಯೆಯಾದ ಛತ್ತೀಸಗಢದ ಕಂಕೇರ್ ಜಿಲ್ಲೆಯ ಹಿಡೂರ್ ಮತ್ತು ಕಲ್ಪಾರ್ ಹಳ್ಳಿಗಳ ಬೆಟ್ಟ ಪ್ರದೇಶದಲ್ಲಿ ಮೌನ ಮನೆಮಾಡಿದೆ. 

ರಾಜ್ಯದಲ್ಲಿ ನಡೆದ ಅತಿದೊಡ್ಡ ಎನ್‌ಕೌಂಟರ್ ಇದು. ಎನ್‌ಕೌಂಟರ್‌ ಪೂರ್ಣಗೊಂಡ ಕೆಲವು ತಾಸುಗಳ ನಂತರ ಇಲ್ಲಿಗೆ ಭೇಟಿ ನೀಡಿದಾಗ, ಮರಗಳ ಮೇಲೆ ಗುಂಡಿನ ಗುರುತುಗಳು ಕಾಣುತ್ತಿದ್ದವು. ಬಿದಿರಿನ ಎಲೆಗಳಿಂದ ಮುಚ್ಚಿದ್ದ ನೆಲದ ಮೇಲೆ ರಕ್ತದ ಕಲೆಗಳೂ ಇದ್ದವು.

ಸಮೀಪದ ಹಳ್ಳಿಗಳ ಆದಿವಾಸಿ ಸಮುದಾಯಕ್ಕೆ ಸೇರಿದವರು ತಾವು ಕಂಡಿದ್ದನ್ನು, ಕೇಳಿದ್ದನ್ನು ಹೊರಗಿನವರ ಜೊತೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಸಮೀಪದ ಹಳ್ಳಿಯ ಲಿಂಗರಾಮ್ ಅವರು ತಮ್ಮ ಸಂಬಂಧಿ, ಸಕ್ರಿಯ ನಕ್ಸಲೀಯ ಸುಕ್ಕು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.

ಸುಕ್ಕು ನಿಷೇಧಿತ ಸಿಪಿಐ(ಮಾವೊವಾದಿ) ಸಂಘಟನೆಗೆ ಚಿಕ್ಕ ವಯಸ್ಸಿನಲ್ಲಿಯೇ ಸೇರಿದ್ದ. ಮನೆಯವರ ವಿರೋಧ ಇದ್ದರೂ ಆ ಸಂಘಟನೆಯ ಜೊತೆ ಉಳಿದಿದ್ದ. ಸುಕ್ಕುವಿನ ಮೃತದೇಹವನ್ನು ಪಡೆದುಕೊಳ್ಳಲು ಕುಟುಂಬದ ಸದಸ್ಯರು ‍ಪೊಲೀಸರನ್ನು ಇನ್ನಷ್ಟೇ ಸಂಪರ್ಕಿಸಬೇಕಿದೆ ಎಂದು ಲಿಂಗರಾಮ್ ಹೇಳಿದರು.

ಎನ್‌ಕೌಂಟರ್‌ ನಡೆದ ಸ್ಥಳದತ್ತ ಸಾಗಲು ಕಚ್ಚಾ ರಸ್ತೆಗಳನ್ನು ಅಲ್ಲಲ್ಲಿ ಅಗೆದುಹಾಕಲಾಗಿದೆ. ಲೋಕಸಭಾ ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿ ನಕ್ಸಲೀಯರು ಅಳವಡಿಸಿರುವ ಪೋಸ್ಟರ್‌ಗಳು ಕಾಣುತ್ತವೆ.

ಈ ಪ್ರದೇಶ ತಲುಪಲು ಕೋಟರಿ ನದಿಯನ್ನು ದಾಟಬೇಕು. ಇದು ಬೇಸಿಗೆಯಲ್ಲಿ ಬತ್ತಿರುತ್ತದೆ. ಇಲ್ಲಿ ಸೇತುವೆ ನಿರ್ಮಿಸಲು ಸ್ಥಳೀಯ ಆಡಳಿತ ಯತ್ನಿಸುತ್ತಿದೆಯಾದರೂ, ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪೊಲೀಸ್ ಇಲಾಖೆಯ ಜಿಲ್ಲಾ ಮೀಸಲು ಗಾರ್ಡ್‌ ಮತ್ತು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಒಟ್ಟು 200 ಸಿಬ್ಬಂದಿ ಬೇರೆ ಬೇರೆ ಸ್ಥಳಗಳಿಂದ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದರು. ಅವರು ಏಪ್ರಿಲ್‌ 15ರಂದು ಮೆಹ್ರಾ ಗ್ರಾಮದಲ್ಲಿ ಸೇರಿದ್ದರು. 

ಮಾವೋವಾದಿಗಳು ಇದ್ದರು ಎನ್ನಲಾದ ಬೆಟ್ಟ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತವರಿದಿದ್ದರು. ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಎನ್‌ಕೌಂಟರ್ ಶುರುವಾಯಿತು. ಅಂದಾಜು ನಾಲ್ಕು ತಾಸು ಎನ್‌ಕೌಂಟರ್‌ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT