ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ: ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

Published 26 ಆಗಸ್ಟ್ 2023, 9:39 IST
Last Updated 26 ಆಗಸ್ಟ್ 2023, 9:39 IST
ಅಕ್ಷರ ಗಾತ್ರ

ಮುಜಾಫರ್‌ನಗರ (ಉತ್ತರ ಪ್ರದೇಶ): ಹೋಮ್‌ ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳಿಂದಲೇ ಕಪಾಳಮೋಕ್ಷ ಮಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕಿ ತ್ರಿಪ್ತ ತ್ಯಾಗಿ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಜಾಫರ್‌ನಗರದ ಖುಬ್ಬಾಪುರ ಗ್ರಾಮದ ನೇಹಾ ಪಬ್ಲಿಕ್‌ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಹೋಮ್‌ ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಹುಡುಗನಿಗೆ ಸಹಪಾಠಿಗಳಿಂದಲೇ ಕಪಾಳ ಮೋಕ್ಷ ಮಾಡುವಂತೆ ಆದೇಶಿಸಿದ್ದ ಶಿಕ್ಷಕಿ, ಕೋಮು ಪ್ರೇರಿತ ಹೇಳಿಕೆಗಳನ್ನು ನೀಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ವಿದ್ಯಾರ್ಥಿಯ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಶಿಕ್ಷಕಿ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯಾವ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ ಎಂಬುವುದರ ಬಗ್ಗೆ ಮಾಹಿತಿ ದೊರೆತಿಲ್ಲ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಆದೇಶಾನುಸಾರ ವಿಡಿಯೊ ಪ್ರಸಾರವನ್ನು ನಿರ್ಬಂಧಿಸಲಾಗಿದೆ.

ನಾನು ಅಂಕವಿಕಲೆ ಎಂದ ಶಿಕ್ಷಕಿ!

ವಿದ್ಯಾರ್ಥಿಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ್ದು ತಪ್ಪಾದರೂ, ತಾನು ವಿಕಲಚೇತನಳಾಗಿರುವುದರಿಂದ ಹೀಗೆ ಮಾಡಿಸಿದೆ ಎಂದು ಶಿಕ್ಷಕಿ ತ್ಯಾಗಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಓದಿ: ಶಿಕ್ಷಕಿಯ ಸೂಚನೆಯಂತೆ ವಿದ್ಯಾರ್ಥಿಗೆ ಥಳಿಸಿದ ಮಕ್ಕಳು; ಉ.ಪ್ರದೇಶ ಶಾಲೆಯಲ್ಲಿ ಘಟನೆ

‘ವಿದ್ಯಾರ್ಥಿಗೆ ಹೋಮ್‌ ವರ್ಕ್ ಮಾಡುವಂತೆ ಸೂಚಿಸಿದ್ದರೂ ಆತ ಅದನ್ನು ಮಾಡಿರಲಿಲ್ಲ. ಆತನ ಬಳಿಗೆ ಹೋಗಲು ನನಗೆ ಸಾಧ್ಯವಾಗಲಿಲ್ಲ. ಆ ಕಾರಣಕ್ಕೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಕಾರಣಕ್ಕೆ ವಿಡಿಯೊವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಮಕ್ಕಳಿಗೆ ಪ್ರೀತಿಸುವುದನ್ನು ಕಲಿಸಬೇಕೆ ವಿನಃ ದ್ವೇಷವನ್ನಲ್ಲ: ರಾಹುಲ್‌ ಗಾಂಧಿ

ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷ ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯನ್ನಾಗಿ ಮಾಡುವುದು... ಇದಕ್ಕಿಂತ ಕೆಟ್ಟದನ್ನು ಒಬ್ಬ ಶಿಕ್ಷಕ ಈ ದೇಶಕ್ಕೆ ಮಾಡಲಾರನು. ದೇಶದ ಮೂಲೆ ಮೂಲೆಯಲ್ಲಿ ಬಿಜೆಪಿ ಇಂತಹ ದ್ವೇಷದ ಬೆಂಕಿಯನ್ನು ಹಚ್ಚಿದೆ. ಮಕ್ಕಳಿಗೆ ಪ್ರೀತಿಸುವುದನ್ನು ಕಲಿಸಬೇಕೆ ವಿನಃ ದ್ವೇಷಸುವುದನ್ನಲ್ಲ ಎಂದು ರಾಹುಲ್‌ ಗಾಂಧಿ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ತಕ್ಷಣ ವಜಾಗೊಳಿಸಿ: ಅಖಿಲೇಶ್‌ ಯಾದವ್

ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಕೂಡಲೇ ಶಿಕ್ಷಕಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT