ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಚಟರ್ಜಿ; ಏಕೈಕ ಸೋಲು ಮಮತಾ ಬ್ಯಾನರ್ಜಿ ವಿರುದ್ಧ

Last Updated 13 ಆಗಸ್ಟ್ 2018, 9:42 IST
ಅಕ್ಷರ ಗಾತ್ರ

ಕೋಲ್ಕತ್ತ: ಸುಮಾರು ನಲವತ್ತು ವರ್ಷ ಸಿಪಿಎಂ ಪ್ರತಿನಿಧಿಯಾಗಿ 10 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸೋಮನಾಥ ಚಟರ್ಜಿ, ತಮ್ಮ ಬದುಕಿನ ಕೊನೆಯ ಕೆಲವರ್ಷಗಳು ಏಕಾಂಗಿಯಾಗಿ ಕಳೆದರು. ಸಂಸತ್ತಿನಲ್ಲಿ ನಿರ್ಣಾಯಕ ಘಟ್ಟದಲ್ಲಿ ಪಕ್ಷದ ವಿರುದ್ಧದ ಧೋರಣೆಯಿಂದ ಸಿಪಿಎಂ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಸ್ಪೀಕರ್‌ ಸ್ಥಾನ ಅಲಂಕರಿಸಿದ ಸಿಪಿಎಂನ ಏಕೈಕ ಮುಖಂಡನನ್ನು ಪಕ್ಷ ಧಿಕ್ಕರಿಸಿತ್ತು. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಮತ್ತು ಸಿಪಿಎಂ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ಭಾರತ–ಅಮೆರಿಕ ಪರಮಾಣು ಒಪ್ಪಂದ. ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ ಭಾರತೀಯ ಕಮ್ಯುನಿಸ್ಟ್‌ ಪಕ್ಷ(ಮಾರ್ಕ್ಸಿಸ್ಟ್‌) ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 2008ರ ಜುಲೈನಲ್ಲಿ ಹಿಂಪಡೆಯಿತು. ಅದೇ ಜುಲೈ 21ರಿಂದ ಪ್ರಾರಂಭವಾಗಲಿದ್ದ ಸಂಸತ್‌ ಅಧಿವೇಶನಕ್ಕೂ ಎರಡು ದಿನ ಮುನ್ನವೇ ಸ್ಪೀಕರ್‌ ಸ್ಥಾನ ತೊರೆದು, ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಚಟರ್ಜಿ ಅವರಿಗೆ ಪಕ್ಷ ಸೂಚಿಸಿತ್ತು.

ಪಕ್ಷ ರಾಜಕಾರಣ ಹಾಗೂ ಮೈತ್ರಿಯಿಂದ ಹೊರತಾದ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಲು ಚಟರ್ಜಿ ನಿರಾಕರಿಸಿದರು. ಸಿಪಿಎಂನ ನಿರ್ಣಯವನ್ನು ಧಿಕ್ಕರಿಸಿದ ಮೊದಲ ಮುಖಂಡ ಎಂಬುದೂ ಅವರ ಬೆನ್ನಿಗೆ ಅಂಟಿಕೊಂಡಿತು. 1996ರಲ್ಲಿಚಟರ್ಜಿ ಅವರ ಆಪ್ತ,ಪಶ್ವಿಮ ಬಂಗಾಳದಲ್ಲಿ ಐದು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರನ್ನು ಪ್ರಧಾನಿಯಾಗದಂತೆ ಪಕ್ಷ ನಿರ್ಧರಿಸಿತ್ತು. ಅಂದಿನಪ್ರಭಾವಿ ಮುಖಂಡರಾಗಿದ್ದ ಜ್ಯೋತಿ ಬಸು ಅವರೇಪಕ್ಷದ ನಿರ್ಧಾರಕ್ಕೆ ತಲೆದೂಗಿದ್ದರು. ಪಕ್ಷದ ವಿರುದ್ಧ ಧೋರಣೆಯ ಫಲವಾಗಿ ಒಂದೇ ತಿಂಗಳಲ್ಲಿ ಸಿಪಿಎಂ ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಆ ದಿನವನ್ನು ’ತನ್ನ ಜೀವನದ ಕರಾಳ ದಿನ’ ಎಂದು ಕರೆದುಕೊಂಡಿದ್ದರು.

ಆಡಳಿತಾರೂಢ ಪಕ್ಷದ ಬೆಂಬಲದೊಂದಿಗೆ ಚಟರ್ಜಿ ಸ್ಪೀಕರ್‌ ಸ್ಥಾನದಲ್ಲಿ ಮುಂದುವರಿದರು. ಪಕ್ಷದಿಂದ ಹೊರಬಂದ ನಂತರ ಚಟರ್ಜಿ ಸ್ಪರ್ಧಿಸುತ್ತಿದ್ದ ಪಶ್ಚಿಮ ಬಂಗಾಳದ ’ಬೋಲ್ಪುರ್‌’ ಕ್ಷೇತ್ರವು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಯಿತು. ಆ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದರೂ ಚಟರ್ಜಿ ಮತ್ತೆ ಅಲ್ಲಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಿದ ಸೀತಾರಂ ಯಚೂರಿ ಅವರು ಸೋಮನಾಥ ಚಟರ್ಜಿ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಕುರಿತು ಸುದ್ದಿಯಾಗಿತ್ತು. ಆದರೆ, ’ಅದಕ್ಕೆ ತಾನು ಒಪ್ಪಲಿಲ್ಲ’ ಎಂದು ಚಟರ್ಜಿ ಸಂದರ್ಶನವೊಂದರಲ್ಲಿ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

1996ರಲ್ಲಿ ’ಅತ್ಯುತ್ತಮ ಸಂಸದೀಯ’ ಪ್ರಶಸ್ತಿಯನ್ನು ನೀಡಿ ಚಟರ್ಜಿ ಅವರನ್ನು ಗೌರವಿಸಲಾಗಿತ್ತು.

ಮಮತಾ ವಿರುದ್ಧ ಸೋಲು

ಅಸ್ಸಾಂನ ತೇಜ್‌ಪುರದಲ್ಲಿ 1929ರಲ್ಲಿ ಜನಿಸಿದ ಸೋಮನಾಥ ಚಟರ್ಜಿ, 1968ರಲ್ಲಿ ರಾಜಕೀಯ ಪ್ರವೇಶಿಸಿದರು. 1971ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1984ರಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಪರಾಭವಗೊಂಡಿದ್ದು, ಅವರ ರಾಜಕೀಯ ಜೀವನದಲ್ಲಿ ಕಂಡ ಏಕೈಕ ಸೋಲು. ಆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 29ನೇ ವಯಸ್ಸಿನಲ್ಲಿಯೇ ಮಮತಾ ಬ್ಯಾನರ್ಜಿ ಸಂಸತ್‌ ಪ್ರವೇಶಿಸಿದ್ದರು.

ದೇಹ ವೈದ್ಯಕೀಯ ಸಂಶೋಧನೆಗೆ

ಸೋಮನಾಥ ಚಟರ್ಜಿ ಅವರು ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದ್ದಾರೆ. ಇತರ ಸಿಪಿಎಂ ಮುಖಂಡರೂ ಸಹ ತಮ್ಮ ದೇಹವನ್ನು ವೈದ್ಯಕೀಯ ಸಂಸ್ಥೆಗಳಿಗೆ ದಾನ ನೀಡಿರುವುದಾಗಿ ಸೀತಾರಂ ಯಚೂರಿ ತಿಳಿಸಿದ್ದಾರೆ. ವೈದ್ಯಕೀಯ ಸಂಸ್ಥೆಗೆ ಪಾರ್ಥೀವ ಶರೀರ ನೀಡುವುದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಹಾಗೂಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಸೋಮನಾಥ ಚಟರ್ಜಿ ನಿಧನ; ಕಂಬನಿಮಿಡಿದಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT