ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮುಸ್ಲಿಮರನ್ನು ದಾಳವಾಗಿ ಬಳಸುತ್ತಿದೆ: ಮೋದಿ

Published 5 ಮೇ 2024, 15:55 IST
Last Updated 5 ಮೇ 2024, 15:55 IST
ಅಕ್ಷರ ಗಾತ್ರ

ಇಟಾವಾ/ಸೀತಾಪುರ: ಭಾರತವು ಮುಂದಿನ ಸಾವಿರ ವರ್ಷಗಳ ಕಾಲ ಶಕ್ತಿಶಾಲಿ ರಾಷ್ಟ್ರವಾಗಿ ಉಳಿಯಲು ಅಡಿಪಾಯ ಹಾಕುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

‘ಮೋದಿ ಇದನ್ನು ಏಕೆ ಮಾಡುತ್ತಿದ್ದಾರೆಂದರೆ, ಮೋದಿ ಇರಲಿ, ಇಲ್ಲದಿರಲಿ, ದೇಶ ಎಂದಿಗೂ ಇರುತ್ತದೆ’ ಎಂದ ಅವರು, ‘ಎಸ್‌ಪಿ–ಕಾಂಗ್ರೆಸ್ ಮಂದಿ ಏನು ಮಾಡುತ್ತಿದ್ದಾರೆ? ಅವರ ಭವಿಷ್ಯ ಮತ್ತು ಅವರ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಮುಲಾಯಂ ಸಿಂಗ್ ಯಾದವ್ ಅವರ ತವರು ಜಿಲ್ಲೆ ಇಟಾವಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ತೊಡಗಿವೆ ಎಂದು ಟೀಕಿಸಿದರು. 

‘ಕುಟುಂಬ ರಾಜಕಾರಣದ ಮೂಲಕ ಇವರು ಸೃಷ್ಟಿಸಿರುವ ಪರಂಪರೆ ಎಂತಹದ್ದು? ಕೆಲವರು ಮೈನ್‌ಪುರಿ, ಕನೌಜ್ ಮತ್ತು ಇಟಾವಾ ಅನ್ನು ತಮ್ಮ ಜಹಗೀರು ಎಂದು ಪರಿಗಣಿಸಿದರೆ, ಕೆಲವರು ಅಮೇಠಿ ಮತ್ತು ರಾಯ್‌ಬರೇಲಿಯನ್ನು ತಮ್ಮ ಜಹಗೀರು ಎಂದು ಪರಿಗಣಿಸಿದ್ದಾರೆ’ ಎಂದು ದೂರಿದರು.

‘ಮೋದಿ ನಿರ್ಮಿಸಿದ ಪರಂಪರೆ ಎಲ್ಲರಿಗೂ ಸೇರಿದ್ದು. 2047ರ ವೇಳೆಗೆ ನಿಮ್ಮ ಮಗ ಮತ್ತು ಮಗಳು ಕೂಡ ಪ್ರಧಾನಿ, ಮುಖ್ಯಮಂತ್ರಿ ಆಗಬೇಕು ಎಂದು ನಾನು ಬಯಸುತ್ತೇನೆ. ಪ್ರತಿಷ್ಠಿತ ಕುಟುಂಬಗಳ ಉತ್ತರಾಧಿಕಾರಿಗಳು ಮಾತ್ರ ಪ್ರಧಾನಿ, ಮುಖ್ಯಮಂತ್ರಿ ಆಗಬಹುದೆನ್ನುವ ಅನಿಷ್ಟ ಪರಂಪರೆಯನ್ನು ಈ ‘ಚಾಯ್‌ವಾಲಾ’ ಮುರಿದಿದ್ದಾರೆ’ ಎಂದು ಹೇಳಿದರು.

‘ಮೋದಿ ಮತ್ತು ಯೋಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಸ್ವಂತ ಮಕ್ಕಳಿಲ್ಲ’ ಎಂದು ಹೇಳಿದರು.  

ಉತ್ತರ ಪ್ರದೇಶದ ಧೌರಹರಾದಲ್ಲಿ ಬಿಜೆಪಿ ಪರ ರ್‍ಯಾಲಿ ನಡೆಸಿದ ಅವರು, ‘ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟ ತಮ್ಮನ್ನು ದಾಳವಾಗಿ ಬಳಸುತ್ತಿವೆ ಎಂದು ಮುಸ್ಲಿಮರಿಗೆ ಈಗ ಅರ್ಥವಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮುಸ್ಲಿಂ ಸಮುದಾಯವೂ ಈಗ ಬಿಜೆಪಿಯತ್ತ ಬರುತ್ತಿದೆ’ ಎಂದು ಪ್ರತಿಪಾದಿಸಿದರು.

‘ಬಡವರು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಸೇರಿದವರು ಕಾಂಗ್ರೆಸ್ ಮತ್ತು ವಿರೋಧಿ ಒಕ್ಕೂಟದಿಂದ ಅಂತರ ಕಾಯ್ದುಕೊಂಡಿದ್ದು, ಬಿಜೆಪಿಯತ್ತ ಬಂದಿದ್ದಾರೆ’ ಎಂದು ಹೇಳಿದರು.

ಬಾಲರಾಮನ ದರ್ಶನದ ನಂತರ ರೋಡ್ ಶೋ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಯಲ್ಲಿ ರೋಡ್ ಶೋ ಆರಂಭಕ್ಕೂ ಮುನ್ನ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಜನವರಿ 22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಮ ಮಂದಿರಕ್ಕೆ ಪ್ರಧಾನಿ ನೀಡಿದ ಮೊದಲ ಭೇಟಿ ಇದು ಎಂದು ವಿಶ್ವ ಹಿಂದೂ ಪರಿಷತ್ ಮಾಧ್ಯಮ ಉಸ್ತುವಾರಿ ಶರತ್ ಶರ್ಮಾ ತಿಳಿಸಿದರು.

ಭಾನುವಾರ ರಾಮ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ‌ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ಫೈಸಲಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ರೋಡ್ ಶೋನಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT