ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌–ಪಿಜಿ ಪರೀಕ್ಷೆ ಮುಂದೂಡಿಕೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Published : 9 ಆಗಸ್ಟ್ 2024, 11:50 IST
Last Updated : 9 ಆಗಸ್ಟ್ 2024, 11:50 IST
ಫಾಲೋ ಮಾಡಿ
Comments

ನವದೆಹಲಿ: ಇದೇ 11ಕ್ಕೆ ನಿಗದಿಯಾಗಿರುವ ನೀಟ್‌–ಪಿಜಿ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಶುಕ್ರವಾರ) ವಜಾಗೊಳಿಸಿದೆ.

ದೇಶದಾದ್ಯಂತ 2,28,542 ಅಭ್ಯರ್ಥಿಗಳು ನೀಟ್‌–ಪಿಜಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. 170 ನಗರಗಳಲ್ಲಿ 416 ಪರೀಕ್ಷಾ ಕೇಂದ್ರಗಳಲ್ಲಿ ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ನೀಟ್‌–ಪಿಜಿ ಪರೀಕ್ಷೆಗೆ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳನ್ನು ತಲುಪುವುದು ಸಮಯ ಅಭಾವದ ಕಾರಣ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ, ಭಾನುವಾರ ನಿಗದಿಯಾಗಿರುವ ಪರೀಕ್ಷೆಯನ್ನು ಮುಂಡೂಡಬೇಕೆಂದು ವಿಶಾಲ್‌ ಸೊರೇನ್‌ ಎಂಬುವರು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು, ಈ ವಿಷಯದ ಕುರಿತು ವಕೀಲ ಅನಾಸ್‌ ತನ್ವೀರ್‌ ಸಲ್ಲಿಸಿದ್ದ ದಾಖಲೆಗಳನ್ನು ಗುರುವಾರ ಪರಿಶೀಲಿಸಿತ್ತು. ಬಳಿಕ, ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿತ್ತು.

ಪರೀಕ್ಷೆ ನಡೆಯಲಿರುವ ನಗರಗಳ ಪಟ್ಟಿಯನ್ನು ಜುಲೈ 31ರಂದು ಪ್ರಕಟಿಸಿರುವ ಎನ್‌ಟಿಎ, ನಿರ್ದಿಷ್ಟ ಪರೀಕ್ಷಾ ಕೇಂದ್ರಗಳನ್ನು ಆಗಸ್ಟ್‌ 8ರಂದು ಪ್ರಕಟಿಸುವುದಾಗಿ ಹೇಳಿದೆ. ಹಾಗಾಗಿ ಪರೀಕ್ಷಾರ್ಥಿಗಳಿಗೆ ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರಗಳನ್ನು ತಲುಪುವುದು ಬಹಳ ತ್ರಾಸದಾಯಕವಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿಂದೆ ಜೂನ್‌ 23ರಂದು ನೀಟ್‌–ಪಿಜಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಕೆಲ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮಗಳ ಕುರಿತು ದೂರುಗಳು ವ್ಯಕ್ತವಾದ ಕಾರಣ ಕೇಂದ್ರ ಆರೋಗ್ಯ ಸಚಿವಾಲಯ ಪರೀಕ್ಷೆಯನ್ನು ಮುಂದೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT