ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌, ಆತಿಶಿ ವಿರುದ್ಧದ ಮೊಕದ್ದಮೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

Published : 30 ಸೆಪ್ಟೆಂಬರ್ 2024, 11:41 IST
Last Updated : 30 ಸೆಪ್ಟೆಂಬರ್ 2024, 11:41 IST
ಫಾಲೋ ಮಾಡಿ
Comments

ನವದೆಹಲಿ: ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿ ಸಂಬಂಧ, ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರ ಮತ್ತು ಬಿಜೆಪಿ ನಾಯಕ ರಾಜೀವ್ ಬಬ್ಬರ್ ಅವರಿಂದ ಪ್ರತಿಕ್ರಿಯೆ ಕೇಳಿದೆ. 

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌.ವಿ.ಎನ್. ಭಟ್ಟಿ ಅವರಿದ್ದ ಪೀಠವು, ಈ ವಿಚಾರದಲ್ಲಿ ನೋಟಿಸ್ ಜಾರಿಗೊಳಿಸಿ, ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದೆ.

ಆತಿಶಿ ಮತ್ತು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ‘ಬಿಜೆಪಿ ದೆಹಲಿಯ ಅಧಿಕೃತ ಪ್ರತಿನಿಧಿಯಾಗಿ ಬಬ್ಬರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆ ಪಕ್ಷದ ಕೇಂದ್ರ ಅಥವಾ ದೆಹಲಿ ಘಟಕ ಸೇರಿದಂತೆ ಯಾರೂ ದೂರು ದಾಖಲಿಸಿಲ್ಲ. ಅಲ್ಲದೆ ಬಬ್ಬರ್ ಮಾನಹಾನಿಗೆ ಒಳಗಾಗಿರುವ ವ್ಯಕ್ತಿಯಲ್ಲ’ ಎಂದು ಪೀಠಕ್ಕೆ ತಿಳಿಸಿದರು.

ಬಬ್ಬರ್ ಪರ ಹಿರಿಯ ವಕೀಲೆ ಸೋನಿಯಾ ಮಾಥುರ್, ಪಕ್ಷದ ಪರವಾಗಿ ಬಿಜೆಪಿ ನಾಯಕರೇ ಪ್ರಕರಣ ದಾಖಲಿಸಿದ್ದಾರೆ ಎಂದು ವಾದಿಸಿದರು.

ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣವು ಬಾಕಿ ಇರುವಂತೆಯೇ ತಮ್ಮ ವಿರುದ್ಧದ ಮೊಕದ್ದಮೆಯನ್ನು ಪ್ರಶ್ನಿಸಿ ಆತಿಶಿ, ಕೇಜ್ರಿವಾಲ್‌ ಸೇರಿ ನಾಲ್ವರೂ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೆ.2ರಂದು ತೀರ್ಪು ನೀಡಿದ್ದ ಹೈಕೋರ್ಟ್‌ ‘ಬಿಜೆಪಿಯನ್ನು ನಿಂದಿಸುವ ಹಾಗೂ ಅನಗತ್ಯ ರಾಜಕೀಯ ಲಾಭ ಗಳಿಸುವ ಉದ್ದೇಶದಿಂದ ಮಾಡಿರುವ ಆರೋಪಗಳು ಪ್ರಾಥಮಿಕವಾಗಿ ಮಾನಹಾನಿಕರವಾಗಿವೆ’ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.

‘ಬಿಜೆಪಿಯು ಕೆಲ ಸಮುದಾಯಗಳಿಗೆ ಸೇರಿದ 30 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದೆ’ ಎಂದು ಆರೋಪಿಸಿ ಆತಿಶಿ, ಕೇಜ್ರಿವಾಲ್‌ ಹಾಗೂ ಇತರ ಎಎಪಿ ನಾಯಕರಾದ ಸುನಿಲ್‌ ಕುಮಾರ್‌ ಗುಪ್ತಾ ಹಾಗೂ ಮನೋಜ್‌ ಕುಮಾರ್‌ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಬಿಜೆಪಿ ನಾಯಕ ರಾಜೀವ್‌ ಬಬ್ಬರ್‌ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT