ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣೆ 2020: ಮೈಸೂರು ಅತಿ ಸ್ವಚ್ಛ ಮಧ್ಯಮ ನಗರ

Last Updated 20 ಆಗಸ್ಟ್ 2020, 20:53 IST
ಅಕ್ಷರ ಗಾತ್ರ

ನವದೆಹಲಿ:ಸ್ವಚ್ಛ ಸರ್ವೇಕ್ಷಣೆ 2020ರ ಸಮೀಕ್ಷೆಯ ವರದಿ ಪ್ರಕಟವಾಗಿದ್ದು, ಮಧ್ಯಮ ಗಾತ್ರದ (3 ಲಕ್ಷದಿಂದ 10 ಲಕ್ಷ ಜನಸಂಖ್ಯೆ) ನಗರಗಳ ಪೈಕಿ ಮೈಸೂರು ಅತ್ಯಂತ ಸ್ವಚ್ಛ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ವರ್ಗದಲ್ಲಿ ತುಮಕೂರು ನಗರ 48ನೇ ಸ್ಥಾನ ಗಳಿಸಿದೆ. ಒಂದು ಲಕ್ಷದಿಂದ 10 ಲಕ್ಷದ ಒಳಗಿನ ಜನಸಂಖ್ಯೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮೈಸೂರಿಗೆ ಎರಡನೇ ಸ್ಥಾನ ಸಿಕ್ಕಿದೆ.

40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳ ಪೈಕಿ ಬೆಂಗಳೂರು ‘ಅತ್ಯುತ್ತಮ ಸ್ವ–ಸುಸ್ಥಿರ ಮಹಾನಗರ’ ಎಂಬ ಹಿರಿಮೆ ಪಡೆದುಕೊಂಡಿದೆ. ಆದರೆ, ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಪಡೆದಿರುವ ರ‍್ಯಾಂಕ್‌ 37.

ಮಧ್ಯ ಪ್ರದೇಶದ ಸುಂದರ ನಗರ ಇಂದೋರ್‌ ಸತತ ನಾಲ್ಕನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದ ಸ್ವಚ್ಛ ನಗರಗಳ ಐದನೇ ವಾರ್ಷಿಕ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. ಗುಜರಾತ್‌ನ ಸೂರತ್‌ ಮತ್ತು ಮಹಾರಾಷ್ಟ್ರದ ನವಿ ಮುಂಬೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

2016ರಲ್ಲಿ ಮೊದಲ ಬಾರಿ ನಡೆದ ಸಮೀಕ್ಷೆಯಲ್ಲಿ ಕರ್ನಾಟಕದ ಮೈಸೂರು ದೇಶದ ಸ್ವಚ್ಛ ನಗರ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು.

ಸ್ವಚ್ಛ ಸರ್ವೇಕ್ಷಣೆ ಏಕೆ?
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದ ಪ್ರಗತಿಯನ್ನು ಅಳೆಯಲು 2014ರಲ್ಲಿ ಮೊದಲ ಬಾರಿಗೆ ‘ಸ್ವಚ್ಛ ಸರ್ವೇಕ್ಷಣೆ’ ಆರಂಭಿಸಲಾಗಿತ್ತು. ಬಯಲು ಬಹಿರ್ದೆಸೆಮುಕ್ತ ಭಾರತ ನಿರ್ಮಾಣದ ಗುರಿಯೊಂದಿಗೆ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳುವ ದಿಸೆಯಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಪೈಪೋಟಿ ಮನೋಭಾವ ಬೆಳೆಸಲು ಸರ್ಕಾರ ಪ್ರತಿವರ್ಷ ಸ್ವಚ್ಛ ನಗರಗಳ ರ‍್ಯಾಂಕ್‌ ಪಟ್ಟಿ ಪ್ರಕಟಿಸುತ್ತಿದೆ.

**

ಭಾರತದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇಂದೋರ್ ನಗರದ ನಿವಾಸಿಗಳಿಗೆ ಶುಭಾಶಯಗಳು. ಸತತ ನಾಲ್ಕು ಬಾರಿ ಈ ಪ್ರಶಂಸೆಗೆ ಪಾತ್ರವಾಗಿರುವ ಇಂದೋರ್ ಖಂಡಿತ‌ ಸಿಕ್ಸರ್‌ ಬಾರಿಸಲಿದೆ
– ಶಿವರಾಜ್‌ ಸಿಂಗ್‌ ಚೌಹಾಣ್‌, ಮಧ್ಯ ಪ್ರದೇಶದ ಮುಖ್ಯಮಂತ್ರಿ

**

ಈ ಬಾರಿಯೂ ಇಂದೋರ್‌ ಖಂಡಿತ ಭಾರತದ ಸ್ವಚ್ಛ ನಗರ ಎಂಬ ಪ್ರಶಂಸೆಗೆ ಪಾತ್ರವಾಗುತ್ತದೆ ಎಂಬ ವಿಶ್ವಾಸವಿತ್ತು
– ಪ್ರತಿಭಾ ಪಾಲ್‌, ಆಯುಕ್ತರು, ಇಂದೋರ್‌ ಮುನ್ಸಿಪಲ್‌ ಕಾರ್ಪೊರೇಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT