ಚೆನ್ನೈ: ಶಿಕ್ಷಣದ ವಿಷಯವನ್ನು ಮರಳಿ ರಾಜ್ಯಪಟ್ಟಿಗೆ ಸೇರಿಸಬೇಕು. ಇಂಥ ಕ್ರಮದಿಂದ ಮಾತ್ರ ನೀಟ್(ವೈದ್ಯಕೀಯ ಅರ್ಹತಾ ಪರೀಕ್ಷೆ)ನಂಥ ಪರೀಕ್ಷೆಗಳಿಗೆ ಅಂತ್ಯ ಹಾಡಲು ಸಾಧ್ಯ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.
ವೈದ್ಯನಾಗಬೇಕೆಂಬ ಹಂಬಲ ಹೊಂದಿದ್ದ ತಮಿಳುನಾಡಿನ 19 ವರ್ಷದ ವಿದ್ಯಾರ್ಥಿಯೊಬ್ಬರು ನೀಟ್‌ನಲ್ಲಿ ಎರಡನೇ ಬಾರಿಯೂ ವಿಫಲವಾಗಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು. ಮಗ ಮೃತಪಟ್ಟ ಒಂದು ದಿನದ ಬಳಿಕ ಅವರ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ತಮಿಳುನಾಡಿನಲ್ಲಿ ನೀಟ್ ಅಗತ್ಯದ ಬಗ್ಗೆ ಪ್ರಶ್ನೆಗಳೆದ್ದಿವೆ.
ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಸ್ಟಾಲಿನ್ ನೀಟ್‌ನ ಔಚಿತ್ಯ ಮತ್ತು ಶಿಕ್ಷಣದ ವಿಷಯಗಳನ್ನು ಪ್ರಸ್ತಾಪಿಸಿದರು.
‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ಒದಗಿಸಬೇಕು. ಪ್ರಜೆಗಳಿಗೆ ನೇರವಾಗಿ ಸಂಬಂಧಪಡುವ ವಿಷಯಗಳನ್ನು ಸಂವಿಧಾನದ ರಾಜ್ಯಪಟ್ಟಿಗೆ ಸೇರಿಸಬೇಕು. ಪ್ರಮುಖವಾಗಿ ಶಿಕ್ಷಣವನ್ನು ರಾಜ್ಯಪಟ್ಟಿಗೆ ತರಬೇಕು. ಹೀಗಾದರೆ ಮಾತ್ರ ನೀಟ್‌ನಂಥ ಪರೀಕ್ಷೆಗಳನ್ನು ತೊಡೆದುಹಾಕಲು ಸಾಧ್ಯ ಎಂದು ಡಿಎಂಕೆ ಸಂಸ್ಥಾಪಕರಾದ ಸಿ.ಎನ್ ಅಣ್ಣಾದೊರೆ, ಪಕ್ಷದ ವರಿಷ್ಠರಾಗಿದ್ದ ಎಂ. ಕುರಣಾನಿಧಿ ಅವರು ಪ್ರತಿಪಾದಿಸುತ್ತಿದ್ದರು’ ಎಂದು ಸ್ಟಾಲಿನ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಮೊದಲಿಗೆ ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣವನ್ನು 1975ರಲ್ಲಿ ತುರ್ತು ಪರಿಸ್ಥಿತಿಯ ವೇಳೆ ಸಮವರ್ಥಿ ಪಟ್ಟಿಗೆ ತರಲಾಗಿತ್ತು. ಆಗಿನಿಂದಲೂ ಶಿಕ್ಷಣದ ವಿಷಯ ಸಮವರ್ಥಿ ಪಟ್ಟಿಯಲ್ಲೇ ಉಳಿದಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನೀತಿ ರೂಪಿಸಲು ಅನುವು ಮಾಡಿಕೊಡಲಾಗಿದೆ. ಶಿಕ್ಷಣದ ವಿಷಯವನ್ನು ರಾಜ್ಯಪಟ್ಟಿಗೆ ಸೇರಿಸಬೇಕೆಂದು ಡಿಎಂಕೆ ಆಗ್ರಹಿಸುತ್ತಲೇ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.