ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ ಅಂತ್ಯದೊಳಗೆ ಇ–ಬಸ್‌ಗಳ ಖರೀದಿ: ಹರ್‌ದೀಪ್‌ ಸಿಂಗ್ ಪುರಿ

Published 12 ಜನವರಿ 2024, 15:33 IST
Last Updated 12 ಜನವರಿ 2024, 15:33 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಮಂತ್ರಿ ಇ–ಬಸ್‌ ಸೇವಾ ಯೋಜನೆ’ಯಡಿ ವಿದ್ಯುತ್‌ ಚಾಲಿತ ಬಸ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಟೆಂಡರ್‌ ಕರೆದಿದೆ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್ ಪುರಿ ಶುಕ್ರವಾರ ಇಲ್ಲಿ ಹೇಳಿದರು.

ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು, ಜನವರಿ ಅಂತ್ಯದೊಳಗೆ ಈ ಬಸ್‌ಗಳನ್ನು ಖರೀದಿಸುವ ಉದ್ದೇಶವಿದೆ. ಬಸ್‌ಗಳ ನಿರ್ಮಾಣಗಾರರ ಜೊತೆಗೆ ಸರ್ಕಾರ ಸಂಪರ್ಕದಲ್ಲಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ಯೋಜನೆಯಡಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) 169 ನಗರಗಳಿಗೆ 10 ಸಾವಿರ ವಿದ್ಯುತ್‌ ಚಾಲಿತ ಬಸ್‌ಗಳನ್ನು ಒದಗಿಸಲಾಗುವುದು. ಪ್ರಸ್ತುತ ವ್ಯವಸ್ಥಿತವಾದ ಬಸ್‌ ಸೇವೆ ಇಲ್ಲದ ನಗರಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 2037ರವರೆಗೂ ಈ ಯೋಜನೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದರು.

ಈ ಬಸ್‌ಗಳಲ್ಲಿ ಪ್ರಯಾಣಿಕರು ಸ್ವಯಂಚಾಲಿತ ದರ ವ್ಯವಸ್ಥೆಯಡಿ ಟಿಕೆಟ್‌ ಖರೀದಿಸಬಹುದಾಗಿದೆ. ಬಸ್‌ಗಳು ಕ್ರಮಿಸುವ ಅಂತರವನ್ನು ಆಧರಿಸಿ ನಿರ್ವಾಹಕರಿಗೆ ಮೊತ್ತ ಪಾವತಿಸಲಾಗುತ್ತದೆ ಎಂದರು.

ಯೋಜನೆಯ ಅಂದಾಜು ವೆಚ್ಚ ₹ 57,613 ಕೋಟಿ. ಕೇಂದ್ರ ಸರ್ಕಾರ ₹20 ಸಾವಿರ ಕೋಟಿ ಹಾಗೂ ಉಳಿದದ್ದನ್ನು ರಾಜ್ಯಗಳು ಭರಿಸಲಿವೆ. ಪರಿಸರಸ್ನೇಹಿ ಸಂಚಾರ ವ್ಯವಸ್ಥೆಗೆ ಉತ್ತೇಜನವನ್ನು ನೀಡುವ ಕ್ರಮವಾಗಿ ಕೇಂದ್ರ ಸಚಿವ ಸಂಪುಟ ಕಳೆದ ವರ್ಷವೇ ಯೋಜನೆಗೆ ಅನುಮೋದನೆ ನೀಡಿತ್ತು. 

ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 1.19 ಕೋಟಿ ವಸತಿಗಳನ್ನು ಮಂಜೂರು ಮಾಡಿದೆ. ಪಿ.ಎಂ ಆವಾಸ್‌ ಯೋಜನೆಯಡಿ (ನಗರ) 1 ಕೋಟಿಗೂ ಅಧಿಕ ಮನೆಗಳ ನಿರ್ಮಾಣ ಪೂರ್ಣವಾಗಿದೆ ಎಂದು ಹೇಳಿದರು.

ಪ್ರತಿ ತಿಂಗಳೂ 1–2 ಲಕ್ಷ ಮನೆಗಳ ಹಂಚಿಕೆ ಕಾರ್ಯ ನಡೆಯುತ್ತಿದೆ. ಫಲಾನುಭವಿಗಳಿಗೆ ಈ ಯೋಜನೆಯಡಿ 79 ಲಕ್ಷ ಮನೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT