ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದಲೇ ಅಪಹರಿಸಿ 3 ಪೊಲೀಸರ ಹತ್ಯೆ

ರಕ್ಷಣಾ ಸಿಬ್ಬಂದಿಯನ್ನು ಬೆದರಿಸಲು ಉಗ್ರರು ಹೊಸ ಕ್ರೌರ್ಯ ತಂತ್ರ
Last Updated 22 ಸೆಪ್ಟೆಂಬರ್ 2018, 1:11 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಿಂದ ಅಪಹರಿಸಲಾದ ಮೂವರು ಪೊಲೀಸರನ್ನು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಮೂರು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ರೀತಿಯ ಕ್ರೌರ್ಯ ಇದರೊಂದಿಗೆ ಆರಂಭವಾಗಿದೆ ಎಂದು‍ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

1.2 ಲಕ್ಷ ಸಿಬ್ಬಂದಿ ಇರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆಯ ನೈತಿಕ ಸ್ಥೈರ್ಯವನ್ನೇ ಈ ಘಟನೆಯು ಕುಸಿಯುವಂತೆ ಮಾಡಿದೆ. ಕನಿಷ್ಠ ಆರು ಮಂದಿ ವಿಶೇಷ ಪೊಲೀಸ್‌ ಅಧಿಕಾರಿಗಳು (ಎಸ್‌ಪಿಒ) ಸಾಮಾಜಿಕ ಮಾಧ್ಯಮ ಮೂಲಕ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್‌ಸ್ಟೆಬಲ್‌ ನಿಸಾರ್‌ ಅಹ್ಮದ್‌, ಎಸ್‌ಪಿಒಗಳಾದ ಫಿರ್‌ದೌಸ್‌ ಅಹ್ಮದ್‌ ಮತ್ತು ಕುಲವಂತ್‌ ಸಿಂಗ್‌ ಅವರ ಮೃತದೇಹಗಳು ನದಿಯೊಂದರ ಸಮೀಪದ ಹಣ್ಣಿನ ತೋಟದಲ್ಲಿ ಪತ್ತೆಯಾದವು. ದೇಹಗಳು ಗುಂಡೇಟಿನಿಂದ ಜರ್ಜರಿತವಾಗಿವೆ.

ಕಾಶ್ಮೀರದ ಯಾವುದೇ ನಿವಾಸಿ ಎಸ್‌ಪಿಒ ಆಗಿ ಕೆಲಸ ಮಾಡಬಾರದು. ತಕ್ಷಣವೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಹತ್ಯೆ ಮಾಡಲಾಗುವುದು ಎಂಬ ಸಂದೇಶದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದೆ. ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕ ಸಂಘಟನೆ ಈ ವಿಡಿಯೊ ಪ್ರಕಟಿಸಿದೆ ಎಂದು ಹೇಳಲಾಗಿದೆ.

ಬಾಟಗುಂಡ್‌ ಮತ್ತು ಕಾಪ್ರನ್‌ ಗ್ರಾಮಗಳ ಮನೆಗಳಿಂದ ಶುಕ್ರವಾರ ಬೆಳಿಗ್ಗೆ ಈ ಪೊಲೀಸರನ್ನು ಅಪಹರಿಸಲಾಗಿತ್ತು. ಬಾಟಗುಂಡ್‌ ಗ್ರಾಮದ ಜನರು ಉಗ್ರರನ್ನು ಬೆನ್ನಟ್ಟಿ, ಅಪಹರಿಸದಂತೆ ಮನವಿ ಮಾಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ ಉಗ್ರರು ಗ್ರಾಮಸ್ಥರನ್ನು ಬೆದರಿಸಿದ್ದಾರೆ. ಅಲ್ಲಿಯೇ ಹರಿಯುತ್ತಿದ್ದ ನದಿ ದಾಟಿದ ಉಗ್ರರು, ಸಮೀಪದ ತೋಟದಲ್ಲಿ ಮೂವರು ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದಾರೆ.

ಪೊಲೀಸರನ್ನು ಮನೆಯಿಂದಲೇ ಅಪಹರಿಸಿ ಹತ್ಯೆ ಮಾಡಿದ ಪ್ರಕರಣ ಇದೇ ಮೊದಲು ನಡೆದಿದೆ. ಈತನಕ, ರಸ್ತೆಯಲ್ಲಿ ಅಥವಾ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಮಾತ್ರ ದಾಳಿ ನಡೆಯುತ್ತಿತ್ತು.

ಘಟನೆಯು ತಳ ಹಂತದಲ್ಲಿ ಕೆಲಸ ಮಾಡುವ ಪೊಲೀಸರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿಯೇ ಆರು ಮಂದಿ ರಾಜೀನಾಮೆ ನೀಡಿದ್ದಾರೆ. ಇಬ್ಬರು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದ್ದಾರೆ. ರಾಜೀನಾಮೆ ಬಗ್ಗೆ ಪೊಲೀಸ್‌ ಇಲಾಖೆ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದಷ್ಟೇ ತಿಳಿಸಿದೆ.

ಮೂವರು ಪೊಲೀಸರ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರಲ್ಲಿ ಯಾರೂ ರಾಜೀನಾಮೆ ನೀಡಿಲ್ಲ. ಇದು ಕಿಡಿಗೇಡಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಆರು ಎಸ್‌ಪಿಒಗಳು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅದು ಸತ್ಯವಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

ಯಾರೂ ರಾಜೀನಾಮೆ ನೀಡಿಲ್ಲ: ಗೃಹ ಸಚಿವಾಲಯ

ನವದೆಹಲಿ ವರದಿ: ಮೂವರು ಪೊಲೀಸರ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರಲ್ಲಿ ಯಾರೂ ರಾಜೀನಾಮೆ ನೀಡಿಲ್ಲ. ಇದು ಕಿಡಿಗೇಡಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಆರು ಎಸ್‌ಪಿಒಗಳು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅದು ಸತ್ಯವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಸ್ಪಷ್ಟಪಡಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 30 ಸಾವಿರ ಎಸ್‌ಪಿಒಗಳಿದ್ದಾರೆ. ಇವರ ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ವಿಮರ್ಶಿಸಲಾಗುತ್ತದೆ. ಆಡಳಿತಾತ್ಮಕ ಕಾರಣಕ್ಕೆ ಕೆಲವು ಮಂದಿಯ ಜತೆಗಿನ ಒಪ್ಪಂದವನ್ನು ನವೀಕರಿಸಲಾಗಿಲ್ಲ. ಅಂಥವರು ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT