ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯ: ಆತ್ಮಾವಲೋಕನ ಅಗತ್ಯ–ಮುರ್ಮು

Published 28 ಆಗಸ್ಟ್ 2024, 14:49 IST
Last Updated 28 ಆಗಸ್ಟ್ 2024, 14:49 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿ, ಕೃತ್ಯವನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. 

ಮಹಿಳೆಯರ ವಿರುದ್ಧದ ಕೃತ್ಯಗಳನ್ನು ಬುಡಸಮೇತ ಕಿತ್ತುಹಾಕಲು ಆತ್ಮಾವಲೋಕನ ಅಗತ್ಯ ಎಂದು ಅವರು ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಕೋಲ್ಕತ್ತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ದೇಶಕ್ಕೇ ಆಘಾತವನ್ನು ಉಂಟುಮಾಡಿದೆ. ಕೃತ್ಯದ ವಿರುದ್ಧ ವಿದ್ಯಾರ್ಥಿಗಳು, ವೈದ್ಯರು, ಸಾರ್ವಜನಿಕರು ಹೋರಾಟ ನಡೆಸುತ್ತಿದ್ದಾರೆ. ಆದರೆ ಕ್ರಿಮಿನಲ್‌ಗಳು ಬೇಟೆ ಅರಸಿ ಸುತ್ತುತ್ತಿದ್ದಾರೆ. ಕಿಂಡರ್‌ಗಾರ್ಟನ್‌ನ ಮಕ್ಕಳೂ ಸಂತ್ರಸ್ತರಾಗಿದ್ದಾರೆ. ತಮ್ಮ ಮಕ್ಕಳು ಮತ್ತು ಸಹೋದರಿಯರನ್ನು ಇಂಥ ದೌರ್ಜನ್ಯಕ್ಕೆ ಗುರಿಮಾಡಲು ಯಾವ ನಾಗರಿಕ ಸಮಾಜವೂ ಅವಕಾಶ ನೀಡುವುದಿಲ್ಲ. ಇಡೀ ದೇಶವೇ ಕ್ರುದ್ಧವಾಗಿದೆ. ನಾನೂ ಕ್ರೋಧಿತಳಾಗಿದ್ದೇನೆ’ ಎಂದು ಹೇಳಿದ್ದಾರೆ.

ಆತ್ಮರಕ್ಷಣೆ ತರಬೇತಿ ಅಗತ್ಯ:

ರಕ್ಷಾಬಂಧನ ದಿನದಂದು ರಾಷ್ಟ್ರಪತಿ ಭವನಕ್ಕೆ ಬಂದ ಶಾಲಾ ಮಕ್ಕಳು, ‘ನಿರ್ಭಯಾ ರೀತಿ ಪ್ರಕರಣಗಳು ಭವಿಷ್ಯದಲ್ಲಿ ನಡೆಯುವುದಿಲ್ಲ ಎಂದು ಭರವಸೆ ನೀಡುತ್ತೀರಾ? ಎಂದು ಮುಗ್ಧತೆಯಿಂದ ಕೇಳಿದ್ದರು. ನಾಗರಿಕರ ರಕ್ಷಣೆಗೆ ದೇಶವು ಬದ್ಧವಾಗಿದೆ, ಪ್ರತಿಯೊಬ್ಬರಿಗೂ ಅದರಲ್ಲೂ ಹೆಣ್ಣುಮಕ್ಕಳು ಆತ್ಮರಕ್ಷಣೆ  ಮತ್ತು ಮಾರ್ಷಲ್‌ ಆರ್ಟ್‌ ತರಬೇತಿ ಪಡೆಯುವುದು ಅಗತ್ಯ ಎಂದು ತಿಳಿಸಿದೆ. ಆದರೆ ಮಕ್ಕಳ ಮುಗ್ಧ ಪ್ರಶ್ನೆಗೆ ಪೂರ್ಣ ಉತ್ತರವನ್ನು ಸಮಾಜವೇ ನೀಡಬೇಕು’ ಎಂದು ಹೇಳಿದ್ದಾರೆ.

‘ಅದಕ್ಕೆ ಮೊದಲು ಬೇಕಾಗಿರುವುದು ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಆತ್ಮಾವಲೋಕನ. ನಮ್ಮ ತಪ್ಪೇನು, ತಪ್ಪನ್ನು ತಿದ್ದಿಕೊಳ್ಳಲು ನಾವೇನು ಮಾಡಬಹುದು... ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದಿದ್ದಲ್ಲಿ ದೇಶದ ಅರ್ಧ ಭಾಗದ ಜನರು ಇತರರಂತೆ ಮುಕ್ತವಾಗಿ ಓಡಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ಮಹಿಳೆಯರು ಯಾವುದನ್ನಾದರೂ ಪಡೆಯಲು ಹೋರಾಟ ನಡೆಸಲೇಬೇಕು. ಮಹಿಳೆಯ ಹಕ್ಕುಗಳ ವಿಸ್ತೃತ ಅನುಷ್ಠಾನಕ್ಕೆ ಸಾಮಾಜಿಕ ಕಟ್ಟಪಾಡುಗಳು ಯಾವಾಗಲೂ ಅಡ್ಡಿಪಡಿಸುತ್ತವೆ. ನಾನಿದನ್ನು ಪುರುಷ ಮನಸ್ಥಿತಿ ಎಂದು ಕರೆಯುವುದಿಲ್ಲ. ಈ ಮನಃಸ್ಥಿತಿಯು ಮಹಿಳೆಯರನ್ನು ಎರಡನೇ ದರ್ಜೆ, ದುರ್ಬಲ, ಅಸಮರ್ಥ ಎಂದು ಭಾವಿಸುತ್ತದೆ. ಇಂಥ ಮನಃಸ್ಥಿತಿ ಇದ್ದವರು ಮಹಿಳೆಯನ್ನು ವಸ್ತುವಿನಂತೆ ಪರಿಭಾವಿಸುತ್ತಾರೆ. ಸ್ತ್ರೀಯರ ವಿರುದ್ಧದ ಕೃತ್ಯಗಳಿಗೆ ಇದೇ ಕಾರಣ’ ಎಂದು ವಿವರಿಸಿದ್ದಾರೆ.

ವಿಕೃತ ಘಟನೆಗಳಿಂದ ಪಾಠ ಕಲಿತಿದ್ದೇವಾ?:

‘ನಿರ್ಭಯಾ ಘಟನೆ ನಡೆದ 12 ವರ್ಷಗಳ ನಂತರವೂ ಇಂಥದ್ದೇ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದೇಶದ ಗಮನ ಸೆಳೆಯುತ್ತವೆ ಮತ್ತು ಬಹು ಬೇಗ ಜನಮನದಿಂದ ಅಳಿಸಿಹೋಗುತ್ತಿವೆ. ಇವುಗಳಿಂದ ನಾವು ಪಾಠ ಕಲಿತಿದ್ದೇವಾ? ಇಲ್ಲ, ಮತ್ತೊಂದು ಘೋರ ಅಪರಾಧ ಸಂಭವಿಸಿದಾಗ ಮಾತ್ರ ನೆನಪಿಸಿಕೊಳ್ಳುತ್ತೇವೆ. ಇಂಥ ವಿಕೃತ ಘಟನೆಗಳು ನಮ್ಮ ಸ್ಮೃತಿಪಟಲದಿಂದ ಮರೆಯಾಗಬಾರದು. ಹಿಂದಿನ ವೈಫಲ್ಯಗಳನ್ನು ನೆನಪಿಸಲು ಮತ್ತು ಭವಿಷ್ಯದಲ್ಲಿ ಜಾಗರೂಕರಾಗಿ ಇರಲು ಆ ಕಹಿ ಘಟನೆಗಳನ್ನು ನೆನಪಿನಲ್ಲಿಡಬೇಕು’ ಎಂದು ಹೇಳಿದ್ದಾರೆ.

ನಮ್ಮ ಹೆಣ್ಣುಮಕ್ಕಳು ಸ್ವಾತಂತ್ರ್ಯ ಪಡೆಯುವ ಮಾರ್ಗದಲ್ಲಿ ಎದುರಾಗುವ ಅಡೆತಡೆಗಳನ್ನು ತೆಗೆದುಹಾಕಬೇಕು. ನಂತರವಷ್ಟೇ  ಮುಂದಿನ ರಕ್ಷಾ ಬಂಧನದಲ್ಲಿ ಮಕ್ಕಳ ಮುಗ್ಧ ಪ್ರಶ್ನೆಗೆ ಉತ್ತರವನ್ನು ನೀಡಬಹುದು. 

Highlights - ಅತ್ಯಾಚಾರ ನಿರ್ಮೂಲನೆಗೆ ಆತ್ಮಾವಲೋಕನ ಅಗತ್ಯ ಎಂದ ರಾಷ್ಟ್ರಪತಿ ಹೆಣ್ಣುಮಕ್ಕಳು ಆತ್ಮರಕ್ಷಣೆ  ಮತ್ತು ಮಾರ್ಷಲ್‌ ಆರ್ಟ್‌ ತರಬೇತಿ ಪಡೆಯುವುದು ಅಗತ್ಯ ಮಹಿಳೆ ದುರ್ಬಲಳು ಎಂಬ ಮನಸ್ಥಿತಿಯೇ ಕೃತ್ಯಕ್ಕೆ ಕಾರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT