ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಡ್‌ ಶೋ ವೇಳೆ ವಾಹನದಿಂದ ಬಿದ್ದ ತೆಲಂಗಾಣ ಸಚಿವ ಕೆಟಿಆರ್‌

Published 9 ನವೆಂಬರ್ 2023, 14:25 IST
Last Updated 9 ನವೆಂಬರ್ 2023, 14:25 IST
ಅಕ್ಷರ ಗಾತ್ರ

ಹೈದರಾಬಾದ್‌:  ಆಡಳಿತಾರೂಢ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ ರಾಮರಾವ್‌ (ಕೆಟಿಆರ್‌)  ಅವರು ನಿಜಾಮಬಾದ್‌ ಜಿಲ್ಲೆಯ ಆರ್ಮೂರು ಪಟ್ಟಣದಲ್ಲಿ ರೋಡ್‌ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ತೆರೆದ ವಾಹನದಿಂದ ಬಹುತೇಕ ಕೆಳಗೆ ಬಿದ್ದಿದ್ದಾರೆ. ಚಾಲಕ ಬ್ರೇಕ್‌ ಹಾಕಿದಾಗ ಈ ದುರ್ಘಟನೆ ನಡೆದಿದ್ದು ರಾಮರಾಮ್‌ ಅವರು  ಅಪಾಯದಿಂದ ಪಾರಾಗಿದ್ದಾರೆ.

ಶಾಸಕ ಜೀವನ್‌ರೆಡ್ಡಿ ಅವರು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ರಾಮರಾವ್‌ ಮತ್ತು ಬಿಆರ್‌ಎಸ್‌ ಸಂಸದ ಕೆ.ಆರ್‌. ಸುರೇಶ್‌ ರೆಡ್ಡಿ ಅವರು ಪ್ರಚಾರ ವಾಹನದಲ್ಲಿ ಅವರ ಜತೆಗಿದ್ದರು. 

ಚಾಲಕನು ಬ್ರೇಕ್‌ ಹಾಕಿದಾಗ ವಾಹನದ ಮೇಲಿನ ಕಟಕಟೆ ಮುರಿದಿರುವುದು ವಿಡಿಯೊದಲ್ಲಿದೆ. ಮಧ್ಯದಲ್ಲಿ ನಿಂತಿದ್ದ ರಾಮರಾವ್‌ ಅವರು ಮುಂದಕ್ಕೆ ಬಾಗಿ ವಾಹನಕ್ಕೆ ಕಟ್ಟಿದ್ದ ಸ್ಪೀಕರ್‌ ಮೇಲೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಾಸಕ ಜೀವನ್‌ರೆಡ್ಡಿ  ಮತ್ತು ಸಂಸದ ಸುರೇಶ್‌ ರೆಡ್ಡಿ ಕೂಡ ವಾಹನದಿಂದ ಬಿದ್ದಿದ್ದಾರೆ.  ಪ್ರಚಾರ ವಾಹನದ ಜತೆಗೇ ತೆರಳುತ್ತಿದ್ದ ಪೊಲೀಸ್‌ ಸಿಬ್ಬಂದಿ ಇವರು ಕೆಳಗೆ ರಸ್ತೆ ಮೇಲೆ ಬೀಳುವುದನ್ನು ತಡೆದಿದ್ದಾರೆ. ಯಾರೂ ಗಾಯಗೊಂಡಿಲ್ಲ. ತಕ್ಷಣವೇ ಅವರು ಕಾರಿನಲ್ಲಿ ಮುಂದೆ ಸಾಗಿದ್ದಾರೆ ಎಂದು ಪೊಲೀಸರು ಸುದ್ದಿಸಂಸ್ಥೆಗೆ ವಿವರಿಸಿದ್ದಾರೆ.

ಪ್ರಥಮ ಮಾಹಿತಿ ವರದಿ ಪ್ರಕಾರ, ಪ್ರಚಾರ ವಾಹನದ ಮುಂದಿದ್ದ ವಾಹನದ ಮುಂದೆ ಕೆಲವರು ದಿಢೀರನೆ ಬಂದಾಗ ಆ ವಾಹನದ ಚಾಲಕ ತಕ್ಷಣ ಬ್ರೇಕ್‌ ಹಾಕಿದ್ದಾನೆ. ಆಗ ಪ್ರಚಾರ ವಾಹನದ ಚಾಲಕನೂ ಬ್ರೇಕ್‌ ಹಾಕಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರದಲ್ಲಿ ಜೀವನ್‌ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ ಎಂದು ಕೆಟಿಆರ್‌ ಎಂದೇ  ಪ್ರಸಿದ್ಧರಾಗಿರುವ ರಾಮರಾವ್‌ ಹೇಳಿದ್ದಾರೆ. ಆ ಬಳಿಕ ಅವರು ಪ್ರಚಾರ ಕಾರ್ಯದಲ್ಲಿ ಭಾಗಹಿಸಲು ಕೊಂಡನ್‌ಗಲ್‌ಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT