ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ: ಕಿಡಿಗೇಡಿಗಳಿಂದ ಅಂಗಡಿಗಳತ್ತ ಕಲ್ಲು ತೂರಾಟ

Published 24 ಜನವರಿ 2024, 14:02 IST
Last Updated 24 ಜನವರಿ 2024, 14:02 IST
ಅಕ್ಷರ ಗಾತ್ರ

ಮುಂಬೈ/ಠಾಣೆ: ಮೂರು ದಿನಗಳ ಹಿಂದಷ್ಟೆ ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ನಯಾನಗರ ಸೇರಿದಂತೆ ಠಾಣೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದುಷ್ಕರ್ಮಿಗಳು ಕೆಲವು ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕಾಶ್ಮೀರಿ ನಗರ, ನಯಾ ನಗರ ಮತ್ತು ನವಘರ್‌ನಲ್ಲಿರುವ ಕೆಲ ಅಂಗಡಿಗಳಿಗೆ ಹಾನಿ ಮಾಡಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೈಕ್‌ಗಳಲ್ಲಿ ಬಂದ ಕಿಡಿಗೇಡಿಗಳು ಅಂಗಡಿಗಳತ್ತ ಕಲ್ಲು ತೂರಾಡಿರುವ ದೃಶ್ಯ ಅದರಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ತಪ್ಪಿತಸ್ಥರ ಪತ್ತೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಮುಸ್ಲಿಂ ಸಮುದಾಯವೇ ಪ್ರಧಾನವಾಗಿರುವ ನಯಾ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರ‍್ಯಾಲಿ ವೇಳೆ ಎರಡು ಸಮುದಾಯಗಳ ನಡುವೆ ಸಂಘರ್ಷ ನಡೆದಿತ್ತು. ಈ ಬೆನ್ನಲ್ಲೇ 13 ಜನರನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿ ಮೀರಾ ರಸ್ತೆ ಮತ್ತು ಬೋರಿವಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಿದ್ದವರ ಮೇಲೂ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಈ ಬೆನ್ನಲ್ಲೇ ನಯಾನಗರ ಪ್ರದೇಶದ ರಸ್ತೆಬದಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ನಗರಾಡಳಿತವು ಮಂಗಳವಾರ ಬುಲ್ಡೋಜರ್‌ ಬಳಸಿ ನೆಲಸಮ ಮಾಡಿದೆ.

‘ನಯಾನಗರ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂಗಡಿಗಳು, ಶಾಲೆ ಮತ್ತು ಶೈಕ್ಷಣಿಕ ಸಂಸ್ಥೆಗಳು ತೆರೆದಿವೆ. ಪ್ರಚೋದನಾತ್ಮಕ ವಿಡಿಯೊಗಳನ್ನು ಹರಿಬಿಡದಂತೆ ಸ್ಥಳೀಯರಲ್ಲಿ ಮನವಿ ಮಾಡಲಾಗಿದೆ. ಕೋಮು ಸಾಮರಸ್ಯ ಹಾಳುಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT