ನವದೆಹಲಿ: ಪರಿಶಿಷ್ಟರಲ್ಲಿ ಒಳಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ವಿರೋಧಿಸಿ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ‘ಭಾರತ ಬಂದ್’ಗೆ, ಪರಿಶಿಷ್ಟರು ಹಾಗೂ ಬುಡಕಟ್ಟು ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಹಾರದಲ್ಲಿ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದರೆ, ಕೆಲವೆಡೆ ರಸ್ತೆ, ರೈಲು ತಡೆ ನಡೆಸಲಾಗಿದೆ.
ಉಳಿದಂತೆ ದೇಶದ ಇತರ ಭಾಗಗಳಲ್ಲಿ ‘ಭಾರತ ಬಂದ್’ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಪರಿಶಿಷ್ಟರಲ್ಲಿ ಒಳಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನೂರ್ಜಿತಗೊಳಿಸುವ ಕಾಯ್ದೆಯನ್ನು ಸಂಸತ್ ರೂಪಿಸಬೇಕು ಎಂದು ಒತ್ತಾಯಿಸಿ, ‘ರಾಷ್ಟ್ರೀಯ ದಲಿತ ಮತ್ತು ಆದಿವಾಸಿ ಸಂಘಟನೆಗಳ ಒಕ್ಕೂಟ’ (ಎನ್‌ಎಸಿಡಿಎಒಆರ್), ‘ಮೀಸಲಾತಿ ಬಚಾವೊ ಸಂಘರ್ಷ ಸಮಿತಿ’ ಸೇರಿದಂತೆ ಪರಿಶಿಷ್ಟರ 21 ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು.
ಜಾರ್ಖಂಡ್ ರಾಜಧಾನಿ ರಾಂಚಿ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ದೂರದ ಊರುಗಳಿಗೆ ಸಂಚರಿಸುವ ಬಸ್‌ಗಳನ್ನು ವಿವಿಧೆಡೆ ನಿಲ್ಲಿಸಿದ್ದರಿಂದ ಜನರು ತೊಂದರೆ ಅನುಭವಿಸಬೇಕಾಯಿತು.
ಬಿಹಾರದಲ್ಲಿ ಘರ್ಷಣೆ
ಬಿಹಾರದಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ.
ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಮೊದಲು ಜಲಫಿರಂಗಿ ಬಳಸಿದರು. ಪ್ರತಿಭಟನೆ ತೀವ್ರಗೊಂಡ ಕಾರಣ, ಲಾಠಿ ಪ್ರಹಾರ ನಡೆಸಿದರು.
ದರ್ಭಂಗಾ ಮತ್ತು ಬಕ್ಸರ್‌ನಲ್ಲಿ ರೈಲು ನಿಲ್ದಾಣಗಳಿಗೆ ನುಗ್ಗಿದ ಪ್ರತಿಭಟನಕಾರರು, ರೈಲುಗಳನ್ನು ತಡೆದರು. ಪಟ್ನಾ, ಹಾಜಿಪುರ, ದರ್ಭಂಗಾ, ಜೆಹನಾಬಾದ್ ಮತ್ತು ಬೇಗುಸರಾಯ್‌ನಲ್ಲಿ ರಸ್ತೆ ನಡೆಸಿದ್ದರಿಂದ ಜನರು ತೊಂದರೆ ಅನುಭವಿಸಬೇಕಾಯಿತು.
ಲೋಕಸಭಾ ಸಂಸದ (ಪಕ್ಷೇತರ) ಪಪ್ಪು ಯಾದವ್ ನೇತೃತ್ವದಲ್ಲಿ ಪಟ್ನಾದಲ್ಲಿ ಪ್ರತಿಭಟನೆ ನಡೆಯಿತು. ಆರ್‌ಜೆಡಿ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಅಂಗಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು
ಎಲ್ಲೆಲ್ಲಿ ಪ್ರತಿಭಟನೆ
ಉತ್ತರ ಪ್ರದೇಶ
ಲಖನೌ, ಕಾನ್ಪುರ, ಉನ್ನಾವೊ, ಅಲಿಗಢ, ಮುಜಫ್ಫರನಗರ, ಸಂಭಲ್, ಎಟಾವ, ಮಥುರಾ, ಹಾಥ್ರಸ್, ಗೋರಖ್‌ಪುರ ಹಾಗೂ ಆಗ್ರಾದಲ್ಲಿ ಪ್ರತಿಭಟನೆ ನಡೆಯಿತು.
ಲಖನೌದ ಹಜರತ್‌ಗಂಜ್ ಪ್ರದೇಶದಲ್ಲಿ ಬಿಎಸ್‌ಪಿ ಕಾರ್ಯಕರ್ತರು ಪ್ರತಿಭಟಿಸಿದರು
ಆಗ್ರಾದಲ್ಲಿ ಪ್ರತಿಭಟನಕಾರರು ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸಿದರೆ, ಬಿಎಸ್‌ಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಗೇಟ್ ಏರಿ ಪ್ರತಿಭಟಿಸಿದರು
ಗುಜರಾತ್
ಗೂಡ್ಸ್ ರೈಲುಗಳ ಹಾಗೂ ಬಸ್ ಸಂಚಾರ ತಡೆಯುವ ಮೂಲಕ ಪ್ರತಿಭಟನಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು
ಪರಿಶಿಷ್ಟ ಸಮುದಾಯದವರ ಜನಸಂಖ್ಯೆ ಹೆಚ್ಚಾಗಿರುವ ಛೋಟಾ ಉದೇಪುರ, ನರ್ಮದಾ, ಸುರೇಂದ್ರನಗರ, ಸಬರಕಾಂಠಾ ಹಾಗೂ ಆರವಲ್ಲಿ ಜಿಲ್ಲೆಗಳಲ್ಲಿ ಪ್ರತಿಭಟನೆ ಜೋರಾಗಿತ್ತು
ರಾಜಸ್ಥಾನ
ಬಂದ್ ಹಿನ್ನೆಲೆಯಲ್ಲಿ ಭರತಪುರದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು
ಜೈಪುರದಲ್ಲಿ ಮಾರುಕಟ್ಟೆಗಳು ಬಿಕೊ ಎನ್ನುತ್ತಿದ್ದವು
ಒಡಿಶಾ
ಪರಿಶಿಷ್ಟ ಹಾಗೂ ಆದಿವಾಸಿ ಗುಂಪುಗಳು ಒಡಿಶಾದ ಹಲವೆಡೆ ಪ್ರತಿಭಟಿಸಿದರು
ರಾಜಧಾನಿ ಭುವನೇಶ್ವರ ಹಾಗೂ ಸಂಬಲ್‌ಪುರದಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿತ್ತು
ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಆದಿವಾಸಿ–ಮೂಲವಾಸಿ ಸಂಘಟನೆಗಳ ಕಾರ್ಯಕರ್ಯರು ಬುಧವಾರ ಪ್ರತಿಭಟಿಸಿದರು
ಪಿಟಿಐ
ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಬುಧವಾರ ನಡೆದ ಭಾರತ ಬಂದ್‌ಗೆ ಬೆಂಬಲ ಸೂಚಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ಬಸ್ತಿ ನಗರದಲ್ಲಿ ಮೆರವಣಿಗೆ ನಡೆಸಿದರು –
ಪಿಟಿಐ ಚಿತ್ರ
ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಬುಧವಾರ ನಡೆದ ಭಾರತ ಬಂದ್ ಅಂಗವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಪಾಲ್ಗೊಂಡಿದ್ದರು –
ಪಿಟಿಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.