ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನವಾಸಿ- ಆದಿವಾಸಿ ಪದಗಳ ನಡುವೆ ವ್ಯತ್ಯಾಸವಿದೆ: ರಾಹುಲ್‌ ಗಾಂಧಿ

Published 4 ನವೆಂಬರ್ 2023, 10:37 IST
Last Updated 4 ನವೆಂಬರ್ 2023, 10:37 IST
ಅಕ್ಷರ ಗಾತ್ರ

ರಾಯಪುರ: ‘ಆದಿವಾಸಿಗಳನ್ನು ‘ವನವಾಸಿ’ಗಳೆಂದು ಬಿಜೆಪಿಗರು ಕರೆದಿದ್ದಾರೆ. ವನವಾಸಿ– ಆದಿವಾಸಿ ಪದಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ವನವಾಸಿ ಪದ ಬಳಕೆ ಆದಿವಾಸಿಗಳಿಗೆ ಮಾಡುವ ಅಪಮಾನವಾಗಿದೆ. ವನವಾಸಿ ಪದವನ್ನು ಕಾಂಗ್ರೆಸ್ ಎಂದಿಗೂ ಬಳಸುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಛತ್ತೀಸಗಢದ ಚುನಾವಣೆಗೆ ಜಗದ್ಪುಲರ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿರುವ ರಾಹುಲ್‌ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವನವಾಸಿ ಪದವನ್ನು ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್‌ ಸೇರಿ ಹುಟ್ಟು ಹಾಕಿದೆ ಎಂದರು.

‘ಪ್ರಾಣಿಗಳ ಮೇಲೆ ಬಿಜೆಪಿ ನಾಯಕನೊಬ್ಬ ಮೂತ್ರ ಮಾಡಿರುವುದನ್ನು ನೀವು ನೋಡಿದ್ದಿರಾ? ಆದರೆ ನೀವು ಒಬ್ಬ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ಮಾಡಿರುವುದನ್ನು ನೋಡಿರಲೇಬೇಕು. ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕನೊಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಮೂತ್ರ ಮಾಡಿ ಅದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಾನೆ. ಇದೇ ಬಿಜೆಪಿಗರ ನಿಜವಾದ ವ್ಯಕ್ತಿತ್ವ. ಅವರ(ಬಿಜೆಪಿಗರ) ಪ್ರಕಾರ ನಿಮ್ಮ(ಆದಿವಾಸಿಗಳ) ಜಾಗವೆನಿದ್ದರು ಅದು ಅರಣ್ಯ. ಆದ್ದರಿಂದಲೇ ಅವರು ನಿಮ್ಮನ್ನು ಪ್ರಾಣಿಗಳ ಹಾಗೆ ನಡೆಸಿಕೊಳ್ಳುತ್ತಾರೆ’ ಎಂದು ಕಿಡಿಕಾರಿದರು.

‘ಆದಿವಾಸಿ ಎನ್ನುವುದು ಒಂದು ಕ್ರಾಂತಿಕಾರಿ ಪದ. ಆದಿವಾಸಿ ಎಂದರೆ ಈ ದೇಶದ ಮೂಲನಿವಾಸಿಗಳು. ನಿಮಗೆ ಭೂಮಿಯ ಒಡೆತನವನ್ನು ಮರಳಿಸಬೇಕಾಗಬಹುದು ಎಂಬ ಭಯದಿಂದಲೇ ಬಿಜೆಪಿ ಆದಿವಾಸಿ ಶಬ್ದ ಬಳಕೆ ಮಾಡಲು ಹೆದರುತ್ತದೆ’ ಎಂದು ಹೇಳಿದರು.

‘ಮೊದಲೆಲ್ಲ ಪ್ರಧಾನಿ ಮೋದಿ ಅವರು ವನವಾಸಿ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಈಗೀಗ ಈ ಪದವನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಅವರು ಪದ ಬಳಕೆ ಮಾಡುವುದನ್ನು ನಿಲ್ಲಿಸಿರಬಹುದು ಆದರೆ ಬುಡಕಟ್ಟು ಜನಾಂಗದವರ ಬಗೆಗಿರುವ ಆಲೋಚನೆ ಬದಲಾಗಿರಲು ಸಾಧ್ಯವಿಲ್ಲ’ ಎಂದರು.

‘ನಿಮ್ಮ ಭೂಮಿಯನ್ನು ಅದಾನಿಗೆ ಕೊಡಿ ಎಂದು ಮೋದಿ ಅವರು ನಿಮ್ಮಲ್ಲಿ ಕೇಳುತ್ತಾರೆ. ನೀವು ಕೊಡದಿದ್ದರೂ ಅದಾನಿ ನಿಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಾರೆ. ವಿರೋಧಿಸಿದರೆ ನಿಮ್ಮ ಮೇಲೆ ಗುಂಡು ಹಾರಿಸಲಾಗುತ್ತದೆ. ನಿಮ್ಮ ಭೂಮಿ ಕಸಿದುಕೊಂಡು ನಿಮಗೆ ಹಣ ನೀಡುತ್ತಾರೆಯೇ?. ಅದರಿಂದ ಬರುವ ಲಾಭ ಅದಾನಿ ಮತ್ತು ಬಿಜೆಪಿಗೆ ಸೇರುತ್ತದೆ. ಕೊನೆಗೆ ಆ ಹಣವನ್ನು ಚುನಾವಣೆಗೆ ಬಳಸಲಾಗುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಇದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ದೇಶದಲ್ಲಿ ಒಂದೇ ಜಾತಿಯಿದ್ದರೆ ಪ್ರಧಾನಿ ಮೋದಿ ತನ್ನನ್ನು ತಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಏಕೆ ಕರೆದುಕೊಳ್ಳುತ್ತಾರೆ?’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT