ನವದೆಹಲಿ: ಹೈದರಾಬಾದ್-ದೆಹಲಿ-ಹೈದರಾಬಾದ್ ಮಾರ್ಗದಲ್ಲಿ ಬಾಲೇಶ್ವರ ರೀತಿ ರೈಲು ದುರಂತ ಸಂಭವಿಸಬಹುದು ಎಂಬ ಅನಾಮಧೇಯ ಪತ್ರ ಬಂದ ಹಿನ್ನಲೆಯಲ್ಲಿ ಸರ್ಕಾರ ರೈಲ್ವೆ ಇಲಾಖೆಯನ್ನು ಎಚ್ಚರಿಸಿದೆ.
‘ಮುಂದಿನ ವಾರ ಬಾಲೇಶ್ವರ ರೀತಿಯಲ್ಲಿ ರೈಲು ದುರಂತ ಸಂಭವಿಸಬಹುದು’ ಎಂದು ದಕ್ಷಿಣ ಮಧ್ಯ ರೈಲ್ವೆಯ ಸಿಕಂದರಾಬಾದ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಜೂನ್ 30 ರಂದು ಪತ್ರ ಬಂದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಈ ಪತ್ರವನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ. ಮಂಡಳಿಯು ಎಲ್ಲಾ ವಲಯಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್) ಮತ್ತು ರೈಲ್ವೆ ಪೊಲೀಸ್ (ಜಿಆರ್‌ಪಿ) ಘಟಕಗಳನ್ನು ಸಹ ಎಚ್ಚರಿಸಲಾಗಿದೆ. ಪತ್ರದ ಬಗ್ಗೆ ರಾಜ್ಯ ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಪ್ರಯಾಣಿಕರ ಸುರಕ್ಷತೆ ವಿಷಯಕ್ಕೆ ಬಂದಾಗ ಯಾವುದೇ ಬೆದರಿಕೆಯನ್ನು ಲಘುವಾಗಿ ತೆಗೆದುಕೊಳ್ಳದ ಕಾರಣ ರೈಲ್ವೆ ರೆಡ್ ಅಲರ್ಟ್ ಘೋಷಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲೇಶ್ವರ ರೈಲು ದುರಂತ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಅನಾಮಧೇಯ ಪತ್ರ ಬಂದಿದೆ