ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ | ಲೈಂಗಿಕ ದೌರ್ಜನ್ಯ ಆರೋಪ: ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಬಂಧನ

Published 29 ಫೆಬ್ರುವರಿ 2024, 22:30 IST
Last Updated 29 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಕೋಲ್ಕತ್ತ/ ಬಸೀರ್‌ಹಾತ್: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ದಾಳಿ ಪ್ರಕರಣದ ಆರೋಪಿ, ಟಿಎಂಸಿಯ ಪ್ರಭಾವಿ ನಾಯಕ ಶಹಜಹಾನ್‌ ಶೇಖ್‌ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪಕ್ಷವು ಅವರನ್ನು ಆರು ವರ್ಷಗಳ ಕಾಲ ಅಮಾನತು ಮಾಡಿದೆ. 

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಗ್ರಾಮಸ್ಥರ ಭೂಮಿ ಕಸಿದಿರುವ ಆರೋಪವೂ ಶಹಜಹಾನ್‌ ಮೇಲಿದೆ. ಅವರ ಬಂಧನಕ್ಕೆ ಆಗ್ರಹಿಸಿ ಸಂದೇಶ್‌
ಖಾಲಿಯಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಈ ವಿವಾದವು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.

‘ಉತ್ತರ 24 ಪರಗಣ ಜಿಲ್ಲೆಯ ಮೀನಾಖಾನ್‌ ಠಾಣೆ ವ್ಯಾಪ್ತಿಯ ಬಾಮನ್‌ ಪುಕುರ್‌ ಎಂಬಲ್ಲಿನ ಮನೆಯೊಂದರಲ್ಲಿ ಅವರನ್ನು ಬಂಧಿಸಲಾಗಿದೆ. ಶಹಜಹಾನ್‌, ಕೆಲವು ಸಹಚರರೊಂದಿಗೆ ಅಲ್ಲಿ ಅಡಗಿಕೊಂಡಿದ್ದರು’ ಎಂದು ಎಡಿಜಿಪಿ (ದಕ್ಷಿಣ ಬಂಗಾಳ) ಸುಪ್ರತಿಮ್ ಸರ್ಕಾರ್ ತಿಳಿಸಿದರು. ಈ ಪ್ರದೇಶವು ಸಂದೇಶ್‌ಖಾಲಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. 

ಬಸೀರ್‌ಹಾತ್ ನ್ಯಾಯಾಲಯವು ಅವರನ್ನು 10 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದು, ವಿಚಾರಣೆಗಾಗಿ ಕೋಲ್ಕತ್ತದಲ್ಲಿರುವ ಪೊಲೀಸ್‌ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. 

ಇ.ಡಿ ಅಧಿಕಾರಿಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನಝತ್‌ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಶಹಜಹಾನ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪಡಿತರ ಹಗರಣ ಪ್ರಕರಣದ ಆರೋಪಿಯಾಗಿರುವ ಶಹಜಹಾನ್‌ ಮನೆಯಲ್ಲಿ ಶೋಧ ನಡೆಸಲು ಬಂದಿದ್ದ ಇ.ಡಿ ಅಧಿಕಾರಿಗಳ ಮೇಲೆ ಜನವರಿ 5 ರಂದು ಗುಂಪೊಂದು ದಾಳಿ ನಡೆಸಿತ್ತು. ಈ ಘಟನೆಯ ಬೆನ್ನಲ್ಲೇ ಅವರು ತಲೆಮರೆಸಿಕೊಂಡಿದ್ದರು.

ಶಹಜಹಾನ್‌ ಅವರನ್ನು ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ) ಅಥವಾ ರಾಜ್ಯ ಪೊಲೀಸರು ಬಂಧಿಸಬಹುದು ಎಂದು ಕಲ್ಕತ್ತ ಹೈಕೋರ್ಟ್ ಬುಧವಾರ ಹೇಳಿತ್ತು. ಇದಾದ 24 ಗಂಟೆಗಳಲ್ಲೇ ಬಂಧನ ನಡೆದಿದೆ. ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂದೇಶ್‌ಖಾಲಿಯಲ್ಲಿ ಸ್ಥಳೀಯರು ಸಿಹಿ ಹಂಚಿ ಸಂಭ್ರಮಿಸಿದರು.

ನಿಕಟವರ್ತಿ ಬಂಧನ: ಶಹಜಹಾನ್‌ ನಿಕಟವರ್ತಿ ಅಮೀರ್‌ ಗಾಝಿ ಎಂಬಾತನನ್ನು ಪಶ್ಚಿಮ ಬಂಗಾಳದ ಪೊಲೀಶರು ಒಡಿಶಾದ ರೂರ್ಕೆಲಾದಲ್ಲಿ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

  • ತನಿಖೆ ಕೈಗೆತ್ತಿಕೊಂಡ ಸಿಐಡಿ

  • 55 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ

  • ಜ. 5ರಂದು ಅಧಿಕಾರಿಗಳ ಮೇಲೆ ದಾಳಿ ನಡೆದಿತ್ತು

ಪೂರ್ವಯೋಜಿತ: ಬಿಜೆಪಿ ಟೀಕೆ
ಶಹಜಹಾನ್‌ ಅವರನ್ನು ಬಂಧಿಸಬಹುದು ಎಂದು ನ್ಯಾಯಾಲಯ ಹೇಳಿದ ಕೂಡಲೇ ಬಂಧಿಸಲಾಗಿದೆ ಎಂದು ಟಿಎಂಸಿ ಹೇಳಿದೆ. ಆದರೆ ಬಿಜೆಪಿಯು ‘ಇದು ಪೂರ್ವಯೋಜಿತ’ ಎಂದು ಟೀಕಿಸಿದೆ. ‘ಕಾನೂನಿನ ತೊಡಕು ಇದ್ದ ಕಾರಣ ಅವರ ಬಂಧನ ತಡವಾಗಿತ್ತು. ಆದರೆ ಬಂಧನಕ್ಕೆ ಯಾವುದೇ ತಡೆ ನೀಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ ಬೆನ್ನಲ್ಲೇ ಬಂಧನ ನಡೆದಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಹೇಳಿದರು. ‘ಶಹಜಹಾನ್‌ ಬಂಧನವು ಟಿಎಂಸಿ ಮತ್ತು ಬಂಗಾಳ ಪೊಲೀಸರು ನಡೆಸಿರುವ ನಾಟಕದ ಒಂದು ಭಾಗವಷ್ಟೆ. ಇದು ಪೂರ್ವಯೋಜಿತ ಕೆಲಸ. ಬಿಜೆಪಿ ನಡೆಸಿದ ನಿರಂತರ ಪ್ರತಿಭಟನೆಯಿಂದಾಗಿ ಅವರನ್ನು ಬಂಧಿಸಲಾಗಿದೆ’ ಎಂದು ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಮ್ದಾರ್‌ ಪ್ರತಿಕ್ರಿಯಿಸಿದ್ದಾರೆ. ‘ಸಿಬಿಐ ಮತ್ತು ಇ.ಡಿಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಶಹಜಹಾನ್‌ ಅವರ ಬಂಧನ ನಡೆದಿದೆ. ಬಂಗಾಳ ಪೊಲೀಸರ ಅಸಹಕಾರ ದಿಂದಾಗಿ ಇ.ಡಿ ಅಧಿಕಾರಿಗಳಿಗೆ ಅವರನ್ನು ಇಷ್ಟು ದಿನ ಬಂಧಿಸಲು ಸಾಧ್ಯವಾಗಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT