ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ಚರ್ ವಿಮಾನ ನಿಲ್ದಾಣದಿಂದ ಟಿಎಂಸಿ ನೇತಾರರು ವಾಪಸ್

Last Updated 3 ಆಗಸ್ಟ್ 2018, 5:31 IST
ಅಕ್ಷರ ಗಾತ್ರ

ಸಿಲ್ಚರ್‌ (ಅಸ್ಸಾಂ): ಗುವಾಹಟಿಯ ಸಿಲ್ಚರ್‌ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದತೃಣಮೂಲ ಕಾಂಗ್ರೆಸ್‍ನ ಎಂಟು ಸಂಸದರಲ್ಲಿ 6 ಮಂದಿ ಶುಕ್ರವಾರ ಬೆಳಗ್ಗೆ ಪಶ್ಚಿಮ ಬಂಗಾಳಕ್ಕೆ ವಾಪಸ್ಸಾಗಿದ್ದಾರೆ. ಇನ್ನಿಬ್ಬರು ಶಾಸಕರು ಸ್ವಲ್ಪ ಹೊತ್ತಿನ ನಂತರ ಕೊಲ್ಕತ್ತಾಗೆ ಮರಳಲಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟವಾದ ನಂತರ ಅಸ್ಸಾಂನ ಸ್ಥಿತಿಗತಿ ಏನು ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದರನ್ನು ಅಸ್ಸಾಂಗೆ ಬಂದಿಳಿದಿದ್ದು, ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

ನಾವು ವಾಪಸ್ ಹೋಗುತ್ತಿದ್ದೇವೆ. ಹೊರಗೆ ಹೋಗಲು ಪೊಲೀಸರು ನಮಗೆ ಅನುಮತಿ ನೀಡಿಲ್ಲ. ನಾವು ಹಲವಾರು ಬಾರಿ ವಿನಂತಿ ಮಾಡಿಕೊಂಡರೂ ಅವರು ಒಪ್ಪಲಿಲ್ಲ.ವಿಮಾನ ನಿಲ್ದಾಣದ ಮೂರು ಕೊಠಡಿಗಳಲ್ಲಿ ನಾವು ರಾತ್ರಿ ಕಳೆದೆವು ಎಂದು ರಾಜ್ಯಸಭಾ ಸಂಸದ ಸುಕೇಂದುಶೇಖರ್ ರಾಯ್ ಹೇಳಿದ್ದಾರೆ. ಸುಕೇಂದು ಅವರು ಸಂಸದರಾದ ಕಕೊಲಿ ಘೋಷ್ ದಸ್ತೀದಾರ್, ರತ್ನ ಡೇ ನಾಗ್ ಮತ್ತು ನದೀಮುಲ್ ಹಕ್, ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಶಾಸಕ ಮೊಹಾವ್ ಮೊಯಿತ್ರಾ ಜತೆ ಕೊಲ್ಕತ್ತಾಗೆ ಮರಳಿದ್ದಾರೆ.

ನಿಯೋಗದ ಭೇಟಿಯಿಂದಾಗಿ ಶಾಂತಿ–ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ತಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರು ತಮ್ಮನ್ನು ಎಳೆದಾಡಿದ್ದಾರೆ ಎಂದು ನಿಯೋಗದಲ್ಲಿ ಇದ್ದ ಸಂಸದ ಸುಕೇಂದು ಶೇಖರ್‌ ರಾಯ್‌ ಹೇಳಿದ್ದಾರೆ.

ಪಕ್ಷದ ಸಂಸದರನ್ನು ತಡೆದು ನಿಲ್ಲಿಸಿರುವುದರಿಂದ ಟಿಎಂಸಿ ಅಧ್ಯಕ್ಷೆ ಮಮತಾ ಸಿಟ್ಟಾಗಿದ್ದಾರೆ. ನಿಯೋಗದಲ್ಲಿ ಮಹಿಳೆಯೂ ಇದ್ದರು. ನಿಯೋಗದ ಸದಸ್ಯರನ್ನು ಎಳೆದಾಡಲಾಗಿದೆ. ಬಿಜೆಪಿ ದೇಶದಲ್ಲಿ ‘ಸೂಪರ್‌ ಎಮರ್ಜೆನ್ಸಿ’ ಹೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಿಂದಾಗಿ ಬಿಜೆಪಿಯ ಬಣ್ಣ ಬಯಲಾಗಿದೆ. ಯಾವ ಕಾನೂನಿನ ಅಡಿಯಲ್ಲಿ ನಿಯೋಗವನ್ನು ತಡೆದು ನಿಲ್ಲಿಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಛಾರ್‌ ಜಿಲ್ಲೆಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144 ಪ್ರಕಾರ ನಿಷೇಧಾಜ್ಞೆ ಹೇರಲಾಗಿದೆ. ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇದು ಕಾನೂನು–ಸುವ್ಯವಸ್ಥೆ ಕಾಪಾಡಲು ಕ್ರಮ. ಟಿಎಂಸಿ ನಿಯೋಗ ಭೇಟಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಎಡಿಜಿಪಿ ಪಲ್ಲವ್‌ ಭಟ್ಟಾಚಾರ್ಯತಿಳಿಸಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT