ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಎಂಸಿಯ ರಾಜ್ಯಸಭಾ ಸದಸ್ಯ ಜವಾಹರ್‌ ಸರ್ಕಾರ್ ರಾಜೀನಾಮೆ

Published : 8 ಸೆಪ್ಟೆಂಬರ್ 2024, 8:10 IST
Last Updated : 8 ಸೆಪ್ಟೆಂಬರ್ 2024, 8:10 IST
ಫಾಲೋ ಮಾಡಿ
Comments

ಕೋಲ್ಕತ್ತ: ಇಲ್ಲಿನ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಿರ್ವಹಿಸಲು ಸರ್ಕಾರವು ತೋರಿದ ವಿಳಂಬ ಧೋರಣೆ ಮತ್ತು ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಟಿಎಂಸಿ ಸಂಸದ ಜವಾಹರ್‌ ಸರ್ಕಾರ್‌ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.

ಪಕ್ಷದ ನಾಯಕರ ಒಂದು ವರ್ಗದ ಹಿಡಿತ ಮತ್ತು ಭ್ರಷ್ಟಾಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದರಿಂದ ಭ್ರಮನಿರಸನಗೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.

ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜನರು ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದ ನಿವೃತ್ತ ಐಎಎಸ್ ಅಧಿಕಾರಿಯೂ ಆದ ಸರ್ಕಾರ್‌, ‘ಜನರು ಸರ್ಕಾರದ ವಿರುದ್ಧ ಈ ರೀತಿಯಲ್ಲಿ ವಿಶ್ವಾಸ ಕಳೆದುಕೊಂಡಿದ್ದನ್ನು ನಾನೂ ಹಿಂದೆಂದೂ ನೋಡಿರಲಿಲ್ಲ’ ಎಂದಿದ್ದಾರೆ.

ಪ್ರತಿಭಟನೆಯು ರಾಜಕೀಯೇತರ ಮತ್ತು ಸ್ವಯಂಪ್ರೇರಿತವಾಗಿದೆ. ಅದನ್ನು ‘ರಾಜಕೀಯ’ ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ.

‘ಪ್ರತಿಭಟನೆ ನಡೆಸುತ್ತಿರುವವರಿಗೆ ರಾಜಕೀಯ ಬೇಡ. ಸಂತ್ರಸ್ತೆಗೆ ನ್ಯಾಯ ದೊರೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದೇ ಅವರ ಬೇಡಿಕೆ. ಈ ಹೋರಾಟವು ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸರ್ಕಾರವು ಎಚ್ಚೆತ್ತುಕೊಳ್ಳದಿದ್ದರೆ, ಕೋಮು ಶಕ್ತಿಗಳು ಈ ರಾಜ್ಯವನ್ನು ವಶಪಡಿಸಿಕೊಳ್ಳುತ್ತವೆ’ ಎಂದು ಎಚ್ಚರಿಸಿದ್ದಾರೆ.

‘ಬಿಜೆಪಿಯ ಕೋಮುವಾದಿ ರಾಜಕಾರಣ ಮತ್ತು ಪ್ರಧಾನಮಂತ್ರಿಯ ಸರ್ವಾಧಿಕಾರದ ವಿರುದ್ಧ ಹೋರಾಡುವುದು ನಾನು ರಾಜ್ಯಸಭೆ ಸದಸ್ಯನಾಗುವುದರ ಹಿಂದಿನ ಉದ್ದೇಶವಾಗಿತ್ತು. ಆ ಮಟ್ಟಿಗೆ ನಾನು ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸಿರುವುದಕ್ಕೆ ತೃಪ್ತಿ ಇದೆ. ಸಂಸತ್ತಿನಲ್ಲಿ ನನ್ನ ಕಾರ್ಯವನ್ನು ಉತ್ಸಾಹದಿಂದ ನಿರ್ವಹಿಸಿದರೂ, ರಾಜ್ಯದ ವಿಚಾರದಲ್ಲಿ ನಾನು ಹೆಚ್ಚು ಭ್ರಮನಿರಸನಗೊಂಡಿದ್ದೇನೆ’ ಎಂದು ಹೇಳಿದ್ದಾರೆ.

‘ಶೀಘ್ರ ರಾಜ್ಯಸಭೆಯ ಸಭಾಪತಿಗೆ ರಾಜೀನಾಮೆ ಸಲ್ಲಿಸುತ್ತೇನೆ ಮತ್ತು ರಾಜಕೀಯ ಚಟುವಟಿಕೆಯಿಂದಲೇ ದೂರ ಉಳಿಯುತ್ತೇನೆ’ ಎಂದರು. ‘ಪಂಚಾಯತ್‌ ಮತ್ತು ಪುರಸಭೆಗಳಲ್ಲಿರುವ ಟಿಎಂಸಿಯ ಹಲವು ಚುನಾಯಿತ ಪ್ರತಿನಿಧಿಗಳು ಭಾರಿ ಪ್ರಮಾಣದ ಆಸ್ತಿಗಳನ್ನು ಗಳಿಸಿ ದುಬಾರಿ ಬೆಲೆಯ ವಾಹನಗಳಲ್ಲಿ ಪ್ರಯಾಣಿಸುವುದನ್ನು ನೋಡಿದಾಗ ನನಗೆ ಅಚ್ಚರಿಯಾಗುತ್ತದೆ. ಇದು ಪಶ್ಚಿಮ ಬಂಗಾಳದ ಜನರಿಗೆ ನೋವುಂಟು ಮಾಡಿದೆ’ ಎಂದಿದ್ದಾರೆ.

ಟಿಎಂಸಿ ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆ ಬಯಲಾಗಿದೆ: ಬಿಜೆಪಿ ಟೀಕೆ

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಸಂಸದ ಜವಾಹರ್ ಸರ್ಕಾರ್ ಬರೆದ ಪತ್ರವು ಪಕ್ಷದೊಳಗಿನ ಕೊಳಕು, ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಧೋರಣೆ ಬಹಿರಂಗಪಡಿಸಿದೆ ಎಂದು ಬಿಜೆಪಿ ಭಾನುವಾರ ಟೀಕಿಸಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ‘ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ಅವರ ಪತ್ರವು ಟಿಎಂಸಿಯೊಳಗಿನ ಕೊಳಕುತನ, ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಬಹಿರಂಗಪಡಿಸಿದೆ. ಟಿಎಂಸಿ ಎಂದರೆ ಭಾರಿ ಭ್ರಷ್ಟಾಚಾರ’ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಪ್ರತಿಯೊಂದು ಸಂಸ್ಥೆಯು ಮಮತಾ ಬ್ಯಾನರ್ಜಿ ಅವರ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರದಿಂದ ಜಡ್ಡುಗಟ್ಟಿವೆ. ಸಮಸ್ಯೆಯ ಬಗ್ಗೆ ಧ್ವನಿ ಎತ್ತುವರರ ಧ್ವನಿಯನ್ನು ಅಡಗಿಸಿ, ಮೌನವಾಗಿಸುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಮತಾ ಅವರ ಸರ್ಕಾರದ ಆದ್ಯತೆಯು ‘ಮಗಳಿಗೆ ನ್ಯಾಯ’ ಕೊಡಿಸುವುದಾಗಿರಲಿಲ್ಲ ಎಂಬುದನ್ನು ಬ್ಯಾನರ್ಜಿ ಅವರಿಗೆ ಟಿಎಂಸಿ ಸಂಸದರು ಬರೆದ ಪತ್ರವು ಬಹಿರಂಗಪಡಿಸುತ್ತದೆ ಎಂದು ಪೂನಾವಾಲಾ ಹೇಳಿದರು.

‘ಇದೊಂದು ಸಾಂಸ್ಥಿಕ ಮುಚ್ಚುಮರೆ. ಪೋಷಕರ ಹೇಳಿಕೆ ಮತ್ತು ಇತರ ಪುರಾವೆಗಳಿಂದ, ಟಿಎಂಸಿಯ ಉನ್ನತ ನಾಯಕರ ಆಜ್ಞೆಯ ಮೇರೆಗೆ ಪ್ರಕರಣದಲ್ಲಿ ದೊಡ್ಡಮಟ್ಟದ ಮುಚ್ಚುಮರೆ ಮಾಡಿರುವುದು ಸ್ಪಷ್ಟ. ಘಟನೆಯ ವಿರುದ್ಧ ಜನರು ನಡೆಸಿದ ಚಳವಳಿ ಮಮತಾ ಬಗ್ಗೆ ಅವರು ವಿಶ್ವಾಸ ಕಳೆದುಕೊಂಡಿರುವುದನ್ನು ತೋರಿಸುತ್ತದೆ. ಆದರೂ ಟಿಎಂಸಿ ನಾಯಕರು ಪ್ರತಿಭಟನಕಾರರನ್ನು ನಿಂದಿಸಿ, ಬೆದರಿಕೆ ಹಾಕಿದರು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಮಮತಾ ಬ್ಯಾನರ್ಜಿ ಅವರು ಅಧಿಕಾರದಲ್ಲಿ ಹೇಗೆ ಮುಂದುವರಿದಿದ್ದಾರೆ ಎನ್ನುವುದು ಪ್ರಶ್ನೆ. ಅವರು ಏಕೆ ರಾಜೀನಾಮೆ ನೀಡುತ್ತಿಲ್ಲ? ಅವರು ರಾಜೀನಾಮೆ ನೀಡದಿರುವುದು ಕೋಲ್ಕತ್ತ ಪೊಲೀಸ್‌ ಆಯುಕ್ತರು ಮತ್ತು ಆರ್‌.ಜಿ.ಕರ್‌ ಕಾಲೇಜಿನ ಹಿಂದಿನ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರನ್ನು ರಕ್ಷಣೆ ಮಾಡುವುದಕ್ಕಾಗಿ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT