ಕೋಲ್ಕತ್ತ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು (ಎಫ್‌ಇಎಂಎ) ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಇಂದು (ಗುರುವಾರ) ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ, ತಾನು ಕೃಷ್ಣನಗರದಲ್ಲಿ ಮಧ್ಯಾಹ್ನದ ವೇಳೆ ಪ್ರಚಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಇ.ಡಿ.ಯ ನವದೆಹಲಿಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊಯಿತ್ರಾ ಅವರಿಗೆ ಸೂಚಿಸಲಾಗಿತ್ತು.
ಈ ಮೊದಲು ಎರಡು ಬಾರಿ ಮಹುವಾ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ ಕೆಲವು ಅಧಿಕೃತ ಕೆಲಸಗಳು ತಮಗೆ ಇವೆ ಎಂದು ಹೇಳಿದ್ದ ಮಹುವಾ, ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದ್ದರು.
49 ವರ್ಷದ ಟಿಎಂಸಿ ನಾಯಕಿ ಮಹುವಾ ಅವರು ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಎಫ್‌ಇಎಂಎ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಮತ್ತು ದುಬೈ ಉದ್ಯಮಿ ದರ್ಶನ್ ಹೀರಾನಂದಾನಿ ಮಾರ್ಚ್ 28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಮತ್ತೆ ಸಮನ್ಸ್ ಜಾರಿಗೊಳಿಸಿತ್ತು.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪದ ಅಡಿಯಲ್ಲಿ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಗಿತ್ತು. ಲೋಕಸಭಾ ನೀತಿ–ನಿಯಮ ಸಮಿತಿ ನೀಡಿದ ವರದಿ ಆಧರಿಸಿ, ಮಹುವಾ ಅವರ ವಿರುದ್ಧ ಲೋಕಸಭೆಯಲ್ಲಿ ಅಸಂಬದ್ಧ ನಡವಳಿಕೆಯ ನಿರ್ಣಯವನ್ನು ಅಂಗಿಕರಿಸಲಾಗಿತ್ತು.
ಪ್ರಕರಣ ಸಂಬಂಧ ಮೊಯಿತ್ರಾ ಅವರ ನಿವಾಸ ಹಾಗೂ ಅವರಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಲೋಕಪಾಲ್ ನಿರ್ದೇಶನದಂತೆ ಪ್ರಕರಣದಲ್ಲಿ ಮಹುವಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.