ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪ್ರದೇಶ | ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ, ಆರು ಮಂದಿ ಬಂಧನ

Published 19 ಜುಲೈ 2023, 11:00 IST
Last Updated 19 ಜುಲೈ 2023, 11:00 IST
ಅಕ್ಷರ ಗಾತ್ರ

ಒಂಗೋಲು, ಆಂಧ್ರಪ್ರದೇಶ: ಮಧ್ಯಪ್ರದೇಶದ ಸೀದೀಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಮೂತ್ರ ವಿಸರ್ಜಿಸಿದ್ದ ಪ್ರಕರಣವಿನ್ನೂ ಜನಮಾನಸದಿಂದ ಮರೆಯಾಗಿಲ್ಲ, ಅಷ್ಟರಲ್ಲಿ ಅಂಥದ್ದೇ ಪ್ರಕರಣ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲು ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬುಡಕಟ್ಟು ಸಮುದಾಯದ ಮೋಟ ನವೀನ್‌ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಥಳಿಸಿ, ಆತನ ಮೇಲೆ ಮೂತ್ರ ವಿಸರ್ಜಿಸಲಾಗಿದೆ. ಈ ಪ್ರಕರಣ ಜೂನ್‌ 19ರಂದು ನಡೆದಿದೆ.

ಮನ್ನಂ ರಾಮಾಂಜನೇಯುಲು ಮತ್ತು ಇತರ ಎಂಟು ಜನರು ಪ್ರಕರಣದ ಆರೋಪಿಗಳು. ರಾಮಾಂಜನೇಯುಲು ತಲೆಮರಿಸಿಕೊಂಡಿದ್ದಾನೆ. ಎಂಟು ಆರೋಪಿಗಳಲ್ಲಿ ಇಬ್ಬರು ಚಿಕ್ಕ ವಯಸ್ಸಿನವರು ಎಂದು ಪ್ರಕಾಶಂ ಜಿಲ್ಲೆಯ ಎಸ್‌ಪಿ ಮಲ್ಲಿಕಾ ಗಾರ್ಗ್‌ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನವೀನ್‌ ಮತ್ತು ರಾಮಾಂಜನೇಯಲು ಈ ಮೊದಲು ಸ್ನೇಹಿತರಾಗಿದ್ದು, ರಾಮಾಂಜನೇಯುಲುವಿನ ಮತ್ತೊಬ್ಬ ಸ್ನೇಹಿತನ ಸಂಬಂಧಿ ಯುವತಿಯನ್ನು ನವೀನ್‌ ಪ್ರೀತಿಸುತ್ತಿದ್ದ ವಿಷಯ ತಿಳಿದು ಅವರಿಬ್ಬರ ಸ್ನೇಹ ಮುರಿದುಬಿದ್ದಿತ್ತು. ಎಚ್ಚರಿಕೆ ನೀಡಿದ ಬಳಿಕವೂ ನವೀನ್‌ ಆ ಯುವತಿ ಜೊತೆ ಸಂಬಂಧವನ್ನು ಮುಂದುವರೆಸಿದ್ದ ಕಾರಣ ಕುಪಿತರಾಗಿದ್ದ ಸ್ನೇಹಿತರು ನವೀನ್‌ನನ್ನು ಥಳಿಸಿದ್ದರು. ಬಳಿಕ ಆತನ ಮೇಲೆ ಮೂತ್ರ ವಿಸರ್ಜಿಸಿದ್ದರು ಎಂದು ಅವರು ಹೇಳಿದ್ದಾರೆ.

ದೌರ್ಜನ್ಯದ ಕುರಿತು ನವೀನ್‌ ಪೊಲೀಸರಿಗೆ ದೂರು ನೀಡಿದ್ದ ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ. ಆದರೆ ಆತನ ಮೇಲೆ ಮೂತ್ರ ವಿಸರ್ಜಿಸಿದ ಕುರಿತು ಮಾಹಿತಿ ಬಹಿರಂಗಪಡಿಸಿರಲಿಲ್ಲ.

ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ ವೇಳೆ ನವೀನ್‌ ಮೇಲೆ ಮೂತ್ರ ವಿಸರ್ಜಿಸಿದ್ದನ್ನು ಸೆರೆಹಿಡಿಯಲಾಗಿದ್ದ ವಿಡಿಯೊ ಪತ್ತೆಯಾಯಿತು. ಈ ಅಪರಾಧದ ಗಂಭೀರತೆ ಅರಿತ ಪೊಲೀಸರು ಸ್ವಯಂ ಪ್ರೇರಿತವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡರು ಎಂದು ಗರ್ಗ್‌ ಹೇಳಿದ್ದಾರೆ.

ಹೀಗಿದ್ದೂ ಇದು ಜಾತಿ ಕಾರಣಕ್ಕಾಗಿ ನಡೆದ ಅಪರಾಧವಲ್ಲ. ನವೀನ್‌, ರಾಮಾಂಜನೇಯುಲು ಮತ್ತು ಅವರ ಸ್ನೇಹಿತರು ಈ ಹಿಂದೆ ಹಲವು  ಅಪರಾಧಗಳನ್ನು ಎಸಗಿದ್ದಾರೆ. ಅವರ ವಿರುದ್ಧ ಹಲವು ಮೊಕದ್ದಮೆಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

ಈ ಘಟನೆಗೂ ಮುನ್ನ ನವೀನ್‌ ಯುವತಿ ಜೊತೆ ಪರಾರಿಯಾಗಿದ್ದ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಎಚ್ಚರಿಕೆ ನೀಡಿ ಆತನನ್ನು ಬಿಡುಗಡೆ ಮಾಡಲಾಗಿತ್ತು ಎಂದು ಗರ್ಗ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT