ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

Published 26 ಆಗಸ್ಟ್ 2024, 12:55 IST
Last Updated 26 ಆಗಸ್ಟ್ 2024, 12:55 IST
ಅಕ್ಷರ ಗಾತ್ರ

ಅಗರ್ತಲಾ: ಪಶ್ಚಿಮ ತ್ರಿಪುರಾದ ರಾಣಿರ್‌ಬಜಾರ್‌ ಪ್ರದೇಶದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ವಿರೂಪಗೊಳಿಸಲಾಗಿದ್ದು, ಈ ಸುದ್ದಿ ಹರಡಿದ ಬಳಿಕ ಅಪರಿಚಿತ ವ್ಯಕ್ತಿಗಳು ಕನಿಷ್ಠ 12 ಮನೆಗಳು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಜಿರಾನಿಯಾ ಉಪವಿಭಾಗದಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಕೈತೂರಬಾರಿಯಲ್ಲಿ ಕಾಳಿ ದೇವಿಯ ವಿಗ್ರಹ ವಿರೂಪಗೊಂಡಿದೆ. ಬಳಿಕ ಭಾನುವಾರ ತಡರಾತ್ರಿ ರಾಣಿರ್‌ಬಜಾರ್‌ನಲ್ಲಿ ಸುಮಾರು 12 ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕೆಲವು ಬೈಕ್‌ಗಳು ಮತ್ತು ಪಿಕ್- ಅಪ್ ವ್ಯಾನ್‌ಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ಪೊಲೀಸ್‌ ಅಧಿಕಾರಿ ಅನಂತ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಉದ್ರಿಕ್ತ ಗುಂಪನ್ನು ನೋಡಿದ ನಿವಾಸಿಗಳು ತಮ್ಮ ವಾಸಸ್ಥಳದಿಂದ ಓಡಿಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಉದ್ವಿಗ್ನತೆಯನ್ನು ಶಮನಗೊಳಿಸಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅನಂತ ದಾಸ್ ತಿಳಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕ ಅನುರಾಗ್ ಧಂಕರ್ ಮತ್ತು ಪಶ್ಚಿಮ ತ್ರಿಪುರಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಶಾಂತಿ ಭಂಗದ ಆತಂಕದ ಹಿನ್ನೆಲೆಯಲ್ಲಿ ಆಗಸ್ಟ್ 26 ರಿಂದ 28 ರವರೆಗೆ ಪಶ್ಚಿಮ ತ್ರಿಪುರಾ ಜಿಲ್ಲೆಯ ಜಿರಾನಿಯಾ ಉಪವಿಭಾಗದಲ್ಲಿ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ (ಬಿಎನ್‌ಎಸ್‌ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಲ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಹಿಂಸಾಚಾರವು ಇನ್ನಷ್ಟು ಉಲ್ಬಣಗೊಳ್ಳದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು
ಮಾಣಿಕ್‌ ಶಾ ತ್ರಿಪುರಾ ಮುಖ್ಯಮಂತ್ರಿ
ಪ್ರವಾಹದಿಂದ ಈಗಾಗಲೇ ರಾಜ್ಯ ಬಾಧಿತವಾಗಿದೆ. ಇಂಥ ಸಮಯದಲ್ಲಿ ಕೆಲವರು ಧಾರ್ಮಿಕ ರಾಜಕಾರಣ ಮಾಡುತ್ತಿದ್ದಾರೆ. ದುಷ್ಕರ್ಮಿಗಳು ಯಾವುದೇ ಕೋಮಿಗೆ ಸೇರಿರಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು
ಪ್ರದ್ಯೋತ್‌ ದೇವ್‌ವರ್ಮಾ ಟಿಪ್ರ ಮೊಥಾದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT