ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ | ನಿಮಿಷದ ಅಂತರದಲ್ಲಿ ವಿಮಾನಗಳ ಹಾರಾಟ: ತಪ್ಪಿದ ಅವಘಡ

Published 9 ಜೂನ್ 2024, 14:37 IST
Last Updated 9 ಜೂನ್ 2024, 14:37 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಏರ್‌ ಇಂಡಿಯಾ ವಿಮಾನವು ನಿರ್ಗಮನದ ಹಂತದಲ್ಲಿ ಇರುವಾಗಲೇ, ಇಂಡಿಗೊ ವಿಮಾನವು ಅದೇ ರನ್‌ವೇನಲ್ಲಿ ಇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ತನಿಖೆ ಆರಂಭಿಸಿದೆ.

ಒಂದು ನಿಮಿಷದ ಅಂತರದಲ್ಲಿ ಈ ವಿಮಾನಗಳಿಗೆ ಹಾರಾಟ ಮತ್ತು ಇಳಿಯಲು ಅನುಮತಿ ನೀಡಲಾಗಿದೆ. ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಸಂಭವಿಸುವುದು ತಪ್ಪಿದ್ದು, ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಆ ದಿನ ಕಾರ್ಯ ನಿರ್ವಹಿಸಿದ್ದ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ (ಎಟಿಸಿ) ಘಟಕದ ಅಧಿಕಾರಿಯನ್ನು ಕರ್ತವ್ಯದ ಪಾಳಿಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಡಿಜಿಸಿಎ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೊ ಕಂಪನಿ ಕೂಡ ತನಿಖೆಗೆ ಮುಂದಾಗಿದೆ. ಏರ್‌ ಇಂಡಿಯಾಗೆ ಸೇರಿದ ವಿಮಾನವು ತಿರುವನಂತಪುರಕ್ಕೆ ತೆರಳುತ್ತಿತ್ತು.

ಈ ವಿಮಾನ ನಿಲ್ದಾಣದಲ್ಲಿ ಎರಡು ಕ್ರಾಸಿಂಗ್‌ ರನ್‌ವೇಗಳು ಹಾಗೂ ಒಂದು ಕಾರ್ಯಾಚರಣೆ ರನ್‌ವೇ ಇದೆ. ಈ ರನ್‌ವೇನಲ್ಲಿ ಪ್ರತಿ ಒಂದು ಗಂಟೆಗೆ 46 ವಿಮಾನಗಳ ಆಗಮನ ಮತ್ತು ನಿರ್ಗಮಿಸುತ್ತವೆ.   

ಇಂದೋರ್‌ನಿಂದ ಆಗಮಿಸುತ್ತಿದ್ದ ವಿಮಾನವು ಎಟಿಸಿ ಅಧಿಕಾರಿಯ ಸೂಚನೆಯ ಅನ್ವಯವೇ ಇಳಿದಿದೆ. ನಮಗೆ ಪ್ರಯಾಣಿಕರ ಸುರಕ್ಷತೆ ಮುಖ್ಯವಾಗಿದೆ. ಹಾಗಾಗಿ, ಡಿಜಿಸಿಎಗೆ ವರದಿ ಸಲ್ಲಿಸಿದ್ದೇವೆ ಎಂದು ಇಂಡಿಗೊ ಕಂಪನಿ ತಿಳಿಸಿದೆ. 

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನಿಯಮಾವಳಿ ಅನ್ವಯ, ಹಾರಾಟಕ್ಕೆ ಅನುಮತಿ ಪಡೆದ ವಿಮಾನವು ರನ್‌ವೇ ಹಂತವನ್ನು ಪೂರ್ಣಗೊಳಿಸಿದ ನಂತರವಷ್ಟೇ ಮತ್ತೊಂದು ವಿಮಾನವು ಆ ರನ್‌ವೇನಲ್ಲಿ ಇಳಿಯಲು ಅನುಮತಿ ನೀಡುವುದು ಎಟಿಸಿ ಅಧಿಕಾರಿಯ ಕರ್ತವ್ಯವಾಗಿದೆ.‌

ಆದರೆ, ಈ ಪ್ರಕರಣದಲ್ಲಿ ನಿಯಮಾವಳಿಗಳನ್ನು ‍ಪಾಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT