ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಭೇಟಿ ನೀಡಲಿರುವ ಉಕ್ರೇನ್ ಸಚಿವೆ

Last Updated 8 ಏಪ್ರಿಲ್ 2023, 11:01 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ನ ಮೊದಲ ಉಪ ವಿದೇಶಾಂಗ ಸಚಿವೆ ಎಮೈನ್‌ ಝಪರೋವಾ ಭಾರತಕ್ಕೆ ಭಾನುವಾರದಿಂದ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದು, ಕಳೆದ ವರ್ಷ ರಷ್ಯಾ–ಉಕ್ರೇನ್‌ ಯುದ್ಧ ಪ್ರಾರಂಭವಾದ ಬಳಿಕ ಪೂರ್ವ ಯುರೋಪಿನ ದೇಶಗಳ ಸಚಿವರ ಮೊದಲ ಅಧಿಕೃತ ಭೇಟಿ ಇದಾಗಿದೆ.

ಝಪರೋವಾ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ವರ್ಮಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಉಕ್ರೇನ್‌ ಉಪ ವಿದೇಶಾಂಗ ಸಚಿವೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಉಕ್ರೇನ್‌ ಭೇಟಿಗೆ ಆಹ್ವಾನ ನೀಡುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಉಕ್ರೇನ್‌ನ ಝಪರೋವಾ ಅವರು ಏಪ್ರಿಲ್‌ 9 ರಿಂದ 12ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ದ್ವಿಪಕ್ಷೀಯ ಸಂಬಂಧಗಳು, ಪ್ರಸ್ತುತ ಉಕ್ರೇನ್‌ನ ಪರಿಸ್ಥಿತಿ ಮತ್ತು ಜಾಗತಿಕ ಸಮಸ್ಯೆಗಳಲ್ಲಿನ ಪರಸ್ಪರ ಆಸಕ್ತಿಗಳ ಕುರಿತಂತೆ ಝಪರೋವಾ ಅವರು ವರ್ಮಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದರೊಂದಿಗೆ ವಿದೇಶಾಂಗ ವ್ಯವಹಾರಗಳ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ವಿಕ್ರಮ್‌ ಮಿಶ್ರಿ ಅವರನ್ನು ಭೇಟಿ ಮಾಡಲಿದ್ದಾರೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ಉಕ್ರೇನ್‌–ರಷ್ಯಾ ನಡುವೆ ಸಂಘರ್ಷ ಪ್ರಾರಂಭಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟೀನ್‌ ಮತ್ತು ಉಕ್ರೇನ್‌ ನಾಯಕ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆ ಹಲವು ಬಾರಿ ಮಾತನಾಡಿದ್ದರು.

ಉಕ್ರೇನ್‌ ಜೊತೆಗೆ ಉತ್ತಮ ಸ್ನೇಹ ಸಂಬಂಧ ಮತ್ತು ಸಹಕಾರವನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

‘ಕಳೆದ 30 ವರ್ಷಗಳಿಂದ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರ ಮತ್ತು ರಾಜತಾಂತ್ರಿಕ ಸಂಬಂಧಗಳಿಂದಾಗಿ ವ್ಯಾಪಾರ, ಶಿಕ್ಷಣ, ಸಂಸ್ಕೃತಿ ಮತ್ತು ರಕ್ಷಣೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈಗ ನೀಡುತ್ತಿರುವ ಭೇಟಿಯೂ ಪರಸ್ಪರ ಹೊಂದಾಣಿಕೆ ಮತ್ತು ಆಸಕ್ತಿಗಳನ್ನು ಹೆಚ್ಚಿಸುತ್ತದೆ’ ಎಂದು ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT