ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷಮಾದಾನ: ರಾಷ್ಟ್ರಪತಿ ತೀರ್ಮಾನವೇ ಅಂತಿಮ

Published : 31 ಆಗಸ್ಟ್ 2023, 16:20 IST
Last Updated : 31 ಆಗಸ್ಟ್ 2023, 16:20 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಮರಣ ದಂಡನೆಗೆ ಗುರಿಯಾದ ಅಪರಾಧಿಗಳಿಗೆ ಕ್ಷಮಾದಾನ ಅಥವಾ ಗಲ್ಲು ಶಿಕ್ಷೆಗೆ ವಿಧಿಸುವಂತೆ ರಾಷ್ಟ್ರಪತಿ ಹೊರಡಿಸುವ ಆದೇಶ ಪ್ರಶ್ನಿಸಿ ಯಾವುದೇ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆಯಲ್ಲಿ ನಿರ್ಬಂಧ ಹೇರಲಾಗಿದೆ.

ಕ್ರಿಮಿನಲ್ ಪ್ರೊಸೀಜರ್ ಆ್ಯಕ್ಟ್‌ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಇತ್ತೀಚೆಗೆ ಈ ಮಸೂದೆ ಮಂಡಿಸಿದೆ. ಇದು ಕಾಯ್ದೆಯ ಸ್ವರೂಪ ಪಡೆದರೆ ರಾಷ್ಟ್ರಪತಿ ಆದೇಶದ ವಿರುದ್ಧ ಕೋರ್ಟ್‌ಗಳ ಮಧ್ಯಪ್ರವೇಶಕ್ಕೆ ಕಡಿವಾಣ ಬೀಳಲಿದೆ. ಅಲ್ಲದೇ, ಅಪರಾಧಿಗಳು ನ್ಯಾಯಾಂಗದ ಪರಿಹಾರ ಪಡೆಯಲು ಅವಕಾಶದ ಬಾಗಿಲು ಸಂಪೂರ್ಣವಾಗಿ ಮುಚ್ಚಲಿದೆ. 

ಸಂವಿಧಾನದ 72ನೇ ವಿಧಿ ಅನ್ವಯ ಮರಣ ದಂಡನೆಗೆ ಗುರಿಯಾದ ಅಪರಾಧಿಗಳಿಗೆ ಕ್ಷಮಾದಾನ, ಶಿಕ್ಷೆಗೆ ವಿನಾಯಿತಿ ಅಥವಾ ಅಮಾನತಿನಲ್ಲಿಡುವುದು, ಕ್ಷಮೆ ಅಥವಾ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರವು ರಾಷ್ಟ್ರಪತಿ ಅವರಿಗೆ ಸಂವಿಧಾನದತ್ತವಾಗಿ ನೀಡಲಾಗಿದೆ.

ಆದರೆ, ಹೊಸ ಮಸೂದೆಯ ಸೆಕ್ಷನ್‌ 473ರ ಅನ್ವಯ ರಾಷ್ಟ್ರಪತಿ ಪ್ರಕಟಿಸುವ ಆದೇಶ ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಅಪರಾಧಿಗಳು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ವಿವರಿಸಲಾಗಿದೆ.  

ಅಪರಾಧಿಯ ಕ್ಷಮಾದಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಕೈಗೊಳ್ಳುವ ನಿರ್ಧಾರವು ನ್ಯಾಯಯುತವಾಗಿರಬೇಕು. ಆದರೆ, ಏಕಾಂತ ಬಂಧನ, ಕ್ಷಮದಾನ ಅರ್ಜಿಯ ಅನಗತ್ಯ ವಿಳಂಬವಾದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. 

ಬಹುತೇಕ ಅಪರಾಧಿಗಳು ಕ್ಷಮಾದಾನ ಅರ್ಜಿಯ ವಜಾ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರುತ್ತಿದ್ದರು. ಕೆಲವು ಪ್ರಕರಣಗಳಲ್ಲಿ ದೀರ್ಘ ವಿಳಂಬವು ಸಂವಿಧಾನದ 21ನೇ ವಿಧಿಯ (ಜೀವಿಸುವ ಹಕ್ಕು) ಉಲ್ಲಂಘನೆಯಾಗಲಿದೆ ಎಂದು ವಾದಿಸುತ್ತಿದ್ದರು. ಗಲ್ಲು ಶಿಕ್ಷೆ ವಿಧಿಸುವ ಕೊನೆಯ ಕ್ಷಣದಲ್ಲೂ ಈ ವಿಳಂಬ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT