ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಹ್ಯಾಕಾಶ ದಿನ: ಚಂದ್ರಯಾನ-3ಗೆ ಕೊಡುಗೆ ನೀಡಿದ ಸಿಪಿಎಸ್‌ಇಗಳನ್ನು ಸ್ಮರಿಸಿದ HDK

Published 23 ಆಗಸ್ಟ್ 2024, 5:10 IST
Last Updated 23 ಆಗಸ್ಟ್ 2024, 5:10 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೋದ ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ನೆನಪಿಗಾಗಿ ಭಾರತವು ಇಂದು(ಆಗಸ್ಟ್‌ 23) ತನ್ನ ಮೊದಲ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವನ್ನು ಆಚರಿಸುತ್ತಿದೆ.

ಈ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಸಾಧನೆಗೆ ಬೆಂಬಲವಾಗಿ ನಿಂತ ನಾಲ್ಕು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ(CPSE) ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಭಾರತದ ಚಂದ್ರಯಾನ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವಲ್ಲಿ ಭಾರಿ ಕೈಗಾರಿಕೆಗಳ ಸಚಿವಾಲಯ ಮಹತ್ವದ ಕೊಡುಗೆ ನೀಡಿವೆ ಎಂದು ಕೇಂದ್ರ ಸಚಿವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಾದ ಎಂಎಚ್‌ಐ-ಇನ್‌ಸ್ಟ್ರುಮೆಂಟೇಶನ್ ಲಿಮಿಟೆಡ್ (IL), ಎಫ್‌ಸಿಆರ್‌ಐ, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ಮತ್ತು ಹಿಂದೂಸ್ತಾನ್ ಮೆಷಿನ್ ಟೂಲ್ಸ್ (HMT) ಚಂದ್ರಯಾನ-3ರ ಯಶಸ್ಸಿಗೆ ಉತ್ಪನ್ನಗಳನ್ನು ಪೂರೈಸಿದ್ದವು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

'ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯು ಇಸ್ರೋದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮ. ಜೊತೆಗೆ ನಮ್ಮ ರಾಷ್ಟ್ರದ ಕೈಗಾರಿಕೆಗಳ ಸಹಯೋಗದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ' ಎಂದು ಅವರು ಬಣ್ಣಿಸಿದ್ದಾರೆ.

ಕಳೆದ ವರ್ಷ ಆಗಸ್ಟ್​ 23ರಂದು ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿತ್ತು. ಈ ಐತಿಹಾಸಿಕ ಸಾಧನೆಯನ್ನು ಸ್ಮರಿಸುವುದಕ್ಕಾಗಿ ಆ ದಿನವನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಮತ್ತು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದ ಮೊದಲ ರಾಷ್ಟ್ರವಾಗಿದೆ. ಚಂದ್ರಯಾನ–3ರ ಲ್ಯಾಂಡರ್‌ ವಿಕ್ರಮ್‌, ಚಂದ್ರನ ಮೇಲಿಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್‌’ ಎಂಬುದಾಗಿ ನಾಮಕರಣ ಮಾಡಲಾಗಿತ್ತು.

ಘೋಷವಾಕ್ಯ: 'Touching Lives while Touching the Moon: India’s Space Saga' ಎಂಬ ಘೋಷವಾಕ್ಯದಡಿ ಇಂದು ಮೊದಲನೇ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಆಚರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT