ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತ ಪಡೆವ ವಿಶ್ವಾಸದೊಂದಿಗೆ ಸಿಡಬ್ಲ್ಯುಸಿ ಸಭೆ ಮುಕ್ತಾಯ

ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಹೋರಾಡಲು ಖರ್ಗೆ ಸಲಹೆ
Published 17 ಸೆಪ್ಟೆಂಬರ್ 2023, 16:43 IST
Last Updated 17 ಸೆಪ್ಟೆಂಬರ್ 2023, 16:43 IST
ಅಕ್ಷರ ಗಾತ್ರ

ಹೈದರಾಬಾದ್‌: ಮುಂಬರಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಹುಮತ ಪಡೆಯುವ ವಿಶ್ವಾಸದೊಂದಿಗೆ ಎರಡು ದಿನಗಳ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯು ಭಾನುವಾರ ಹೈದರಾಬಾದ್‌ನಲ್ಲಿ ಮುಕ್ತಾಯಗೊಂಡಿತು.

‘ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಕೆಲ ತಿಂಗಳಲ್ಲಿ ನಡೆಯಲಿವೆ. ಈ ಚುನಾವಣೆಗಳಲ್ಲಿ ಬಹುಮತ ಪಡೆಯುವ ವಿಶ್ವಾಸ ಕಾಂಗ್ರೆಸ್‌ಗೆ ಇದೆ. 2024ರ ಏಪ್ರಿಲ್‌– ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷ ಸಿದ್ಧವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ, ಸ್ವಾತಂತ್ರ್ಯ, ಸಾಮಾಜಿಕ– ಆರ್ಥಿಕ ನ್ಯಾಯ ಹಾಗೂ ಸಮಾನತೆ ಕುರಿತು ಜನರಿಗಿರುವ ನಿರೀಕ್ಷೆಯನ್ನು ಈಡೇರಿಸುತ್ತೇವೆ’ ಎಂಬುದಾಗಿ ಸಿಡಬ್ಲ್ಯುಸಿ ನಿರ್ಣಯ ಅಂಗೀಕರಿಸಿತು.

ತೆಲಂಗಾಣದ ಅಭಿವೃದ್ಧಿ ಕುರಿತು ಕಾಂಗ್ರೆಸ್‌ ಹೊಂದಿರುವ ಬದ್ಧತೆ ಕುರಿತು ಪುನಃ ಭರವಸೆ ನೀಡಿದ ಸಿಡಬ್ಲ್ಯುಸಿ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೇ ಮತ ನೀಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿತು. ‘ಬಂಗಾರ ತೆಲಂಗಾಣದ ಕನಸಿಗೆ ಕಿಡಿ ಹೊತ್ತಿಸುವ ಮತ್ತು ತೆಲಂಗಾಣ ಜನರು ಬಯಸುವಂಥ ಭವಿಷ್ಯವನ್ನು ಅವರಿಗೆ ನೀಡುವ ಸಮಯ ಈಗ ಬಂದಿದೆ’ ಎಂದು ಕೂಡಾ ಎಂದು ನಿರ್ಣಯ ಅಂಗೀಕರಿಸಲಾಯಿತು.

‘ಒಗ್ಗಟ್ಟು, ಶಿಸ್ತಿನಿಂದ ಮಾತ್ರ ಎದುರಾಳಿಯನ್ನು ಗೆಲ್ಲಲು ಸಾಧ್ಯ’

ಭಾನುವಾರದ ಸಭೆಯ ಪ್ರಾಸ್ತಾವಿಕ ಭಾಷಣ ಮಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಪಕ್ಷದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಒಗ್ಗಟ್ಟು ಮತ್ತು ಶಿಸ್ತಿನಿಂದ ಮಾತ್ರ ನಾವು ಎದುರಾಳಿಯನ್ನು ಗೆಲ್ಲಲು ಸಾಧ್ಯ’ ಹೀಗೆಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಎರಡನೇ ದಿನವಾದ ಭಾನುವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಸದ್ಯದ ಮೂಲಭೂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ತಿರುಗುವಂತೆ ಮಾಡಲು ಸರ್ಕಾರವು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಸಭೆಯು ಮುಂಬೈನಲ್ಲಿ ನಡೆದ ವೇಳೆ ಕೇಂದ್ರ ಸರ್ಕಾರವು ‘ಒಂದು ದೇಶ, ಒಂದು ಚುನಾವಣೆ’ ಯೋಜನೆಯ ಕಾರ್ಯಸಾಧ್ಯತೆ ಕುರಿತು ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಿತ್ತು. ತಮ್ಮ ಕಾರ್ಯಸೂಚಿಯನ್ನು ಜಾರಿತರುವ ಉದ್ದೇಶದಿಂದ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಮಾಜಿ ರಾಷ್ಟ್ರಪತಿಯನ್ನು ಸಮಿತಿಯಲ್ಲಿ ಸೇರಿಸಿತು’ ಎಂದರು.

‘ನಮ್ಮ ಎದುರು ಸಾಕಷ್ಟು ಸವಾಲುಗಳು ಇವೆ. ಅದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಸಂಬಂಧಿಸಿದ ಸವಾಲುಗಳಲ್ಲ. ಬದಲಾಗಿ, ದೇಶದ ಪ್ರಜಾಪ್ರಭುತ್ವದ ಉಳಿವು, ಸಂವಿಧಾನವನ್ನು ಕಾಪಾಡುವುದು ಮತ್ತು ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗಗಳು (ಒಬಿಸಿ), ಮಹಿಳೆಯರು, ಬಡವರು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವ ಸವಾಲೂ ನಮ್ಮ ಮುಂದಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌. ಈಗ ಅದನ್ನು ರಕ್ಷಿಸುವ ಹೊಣಗಾರಿಕೆಯೂ ಪಕ್ಷದ ಮೇಲಿದೆ. ಇದಕ್ಕಾಗಿ ನಾವು ನಮ್ಮ ಕೊನೆ ಉಸಿರಿರುವವರೆಗೂ ಹೋರಾಡಬೇಕು’ ಎಂದರು.  

‘ಕಾಂಗ್ರೆಸ್‌ ಅಧ್ಯಕ್ಷರಾಗಿ ಮಹಾತ್ಮ ಗಾಂಧಿ ಅವರು ಆಯ್ಕೆ ಆಗಿ 2024ಕ್ಕೆ ಶತಮಾನ ತುಂಬುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗೆ ಇಡುವುದೇ ನಾವು ಗಾಂಧಿ ಅವರಿಗೆ ನೀಡುವ ಗೌರವ’ ಎಂದರು.

‘ನಾವು ಇಂದು ಹೈದರಾಬಾದ್‌ನಲ್ಲಿ ಇದ್ದೇವೆ. ತೆಲಂಗಾಣ ಮಾತ್ರವಲ್ಲ, ಮುಂಬರಲಿರುವ ಎಲ್ಲಾ ಚುನಾವಣೆಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ದೃಢ ನಿಶ್ಚಯ ಮತ್ತು ಸ್ಪಷ್ಟ ಸಂದೇಶದೊಂದಿಗೆ ತೆಲಂಗಾಣದಿಂದ ಹೊರಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT