ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ: ಯುವಕನಿಂದ 8 ಬಾರಿ ಮತದಾನ

Published 20 ಮೇ 2024, 15:50 IST
Last Updated 20 ಮೇ 2024, 15:50 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಫರೂಖಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಯುವಕನೊಬ್ಬ ಮತಗಟ್ಟೆಯಲ್ಲಿ ಎಂಟು ಬಾರಿ ಮತದಾನ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣದ ಸಂಬಂಧ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಯುವಕ ಸ್ಥಳೀಯ ಬಿಜೆಪಿ ಮುಖಂಡನ ಮಗ ಎನ್ನಲಾಗುತ್ತಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಭಾನುವಾರ ರಾತ್ರಿ ಯುವಕನನ್ನು ಬಂಧಿಸಲಾಗಿದೆ. ಆತ ಎಟಾ ಜಿಲ್ಲೆಯ ಖಿರಿಯ ಪಮರಾನ್ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಫರೂಖಾಬಾದ್‌ ಲೋಕಸಭಾ ಕ್ಷೇತ್ರದ ಆಲಿಗಂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಕ್ಷೇತ್ರದಲ್ಲಿ ಮೇ 13ರಂದು ಮತದಾನ ನಡೆದಿತ್ತು.


ಇವಿಎಂ ಯಂತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರಿನ ಮೇಲೆ ಯುವಕ ಒತ್ತುವುದು ವಿಡಿಯೊದಲ್ಲಿ ದಾಖಲಾಗಿದೆ. ಆತ ಮೊದಲು ತನ್ನ ಮತ ಚಲಾಯಿಸುತ್ತಾನೆ ನಂತರ ತನ್ನ ಮುಖ ತೋರಿಸಿ, ಮತ್ತೊಮ್ಮೆ ಮತ ಹಾಕುತ್ತಾನೆ. ಹಾಗೆ ಆತ ಎಂಟು ಬಾರಿ ಮತದಾನ ಮಾಡಿದ್ದಾನೆ. ಮತಗಟ್ಟೆ ಸಂಖ್ಯೆ 343ರಲ್ಲಿ ಈ ಪ್ರಕರಣ ನಡೆದಿದೆ.   ಸಾಮಾಜಿಕ ಜಾಲತಾಣದಲ್ಲಿ ಅಪಾರ ಗಮನ ಸೆಳೆಯುತ್ತಿರುವ ವಿಡಿಯೊ ಅನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ‘ಎಕ್ಸ್‌’ ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ವಿಡಿಯೊ ಹಂಚಿಕೊಂಡಿದ್ದು, ‘ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ‘ಚುನಾವಣೆಯಲ್ಲಿ ಸೋಲುವುದನ್ನು ಮನಗಂಡು ಬಿಜೆಪಿಯು ಅಧಿಕಾರಿಗಳನ್ನು ಹೆದರಿಸುವ ಮೂಲಕ ಫಲಿತಾಂಶವನ್ನು ಹೈಜಾಕ್ ಮಾಡಲು ಹೊರಟಿದೆ’ ಎಂದು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಮತಗಟ್ಟೆಯ ಎಲ್ಲ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮತಗಟ್ಟೆಯಲ್ಲಿ ಮರುಮತದಾನಕ್ಕೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆಯೂ ಒಂದು ಘಟನೆ ನಡೆದಿತ್ತು. ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದ ಮುಸ್ಲಿಂ ಪ್ರಾಬಲ್ಯದ ಮತಗಟ್ಟೆಗಳ ಹೊರಗೆ ಹೆಚ್ಚು ಮಹಿಳೆಯರು ಮತದಾನ ಮಾಡಲು ನೆರೆದರೆ, ಆಗ ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸುವಂತೆ ಬಿಜೆಪಿ ಮುಖಂಡರೊಬ್ಬರು ಹೇಳಿದ್ದರು. ಅದನ್ನು ನೋಡಿ ಅವರು ಮತದಾನ ಮಾಡದೇ ತೆರಳುತ್ತಾರೆ ಎನ್ನುವುದು ಅವರ ವಾದವಾಗಿತ್ತು. ಪೊಲೀಸರಿಗೆ ಲಂಚ ನೀಡಿದರೆ ಅವರು ತಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದರು. ಅವರನ್ನು ಸಂಭಾಲ್ ಕ್ಷೇತ್ರದ ಬಿಜೆಪಿಯ ನಗರ ಕಾರ್ಯದರ್ಶಿ ಭುವನೇಶ್ ಎಂದು ಗುರುತಿಸಲಾಗಿತ್ತು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ನಂತರ ಅವರನ್ನು ವಶಕ್ಕೆ ಪಡೆಯಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT