ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿರುವ ವೇಳೆಯೇ ಅಲ್ಲಿಯ ಸರ್ಕಾರವು ಭಾರತದಿಂದ ಹೊರಗೆ ಕಳ್ಳಸಾಗಣೆ ಮಾಡಲಾಗಿದ್ದ 297 ಪ್ರಾಚೀನ ಕಲಾಕೃತಿಗಳನ್ನು ಹಿಂತಿರುಗಿಸಿದೆ ಎಂದು ಅಧಿಕೃತ ಹೇಳಿಕೆಯನ್ನು ಭಾನುವಾರ ಪ್ರಕಟಿಸಲಾಗಿದೆ.
ಸಾಂಸ್ಕೃತಿಕ ಸ್ವತ್ತುಗಳನ್ನು ಕಳ್ಳಸಾಗಣೆಯು ದೀರ್ಘಕಾಲದಿಂದ ಹಲವಾರು ಸಂಸ್ಕೃತಿಗಳನ್ನು ಬಾಧಿಸುತ್ತಿರುವ ಸಮಸ್ಯೆಯಾಗಿದೆ. ಇತಿಹಾಸದುದ್ದಕ್ಕೂ ಹಲವಾರು ಸಂಸ್ಕೃತಿ–ಪರಂಪರೆಗಳು ಈ ಸಮಸ್ಯೆಯಿಂದ ನಲುಗಿವೆ. ವಿಶೇಷವಾಗಿ ಭಾರತ ಇದರಿಂದ ಅತಿಹೆಚ್ಚು ಪೆಟ್ಟುತಿಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೂ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸಂಸ್ಕೃತಿಯ ಕೊಂಡಿಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ ಮತ್ತು ಪಾರಂಪರಿಕ ಸ್ವತ್ತುಗಳ ಅಕ್ರಮ ಸಾಗಣೆ ವಿರುದ್ಧದ ಹೋರಾಟವನ್ನು ಬಲಗೊಳಿಸಲಾಗುತ್ತಿದೆ. ಭಾರತಕ್ಕೆ ಸೇರಿದ 297 ಬೆಲೆಕಟ್ಟಲಾಗದ ಕಲಾಕೃತಿಗಳನ್ನು ಹಿಂದಿರುಗಿಸಿದ ಅಮೆರಿಕ ಸರ್ಕಾರ ಮತ್ತು ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.
2014ರಿಂದ ಇಲ್ಲಿಯವರೆಗೆ ಒಟ್ಟು 640 ಕಲಾಕೃತಿಗಳನ್ನು ಭಾರತ ಹಿಂಪಡೆದಿದೆ. ಅವುಗಳಲ್ಲಿ 578 ಕಲಾಕೃತಿಗಳನ್ನು ಅಮೆರಿಕದಿಂದಲೇ ಪಡೆದಿದೆ. ಅವುಗಳಲ್ಲಿ 10–11ನೇ ಶತಮಾನಕ್ಕೆ ಸೇರಿದ ಅಪ್ಸರಾ ಮೂರ್ತಿ, 15–16ನೇ ಶತಮಾನಕ್ಕೆ ಸೇರಿದ ಜೈನ ತೀರ್ಥಂಕರರೊಬ್ಬರ ಮೂರ್ತಿಗಳು ಪ್ರಮುಖವಾಗಿವೆ.
-------
ಹಿಂಪಡೆಯಲಾಗಿರುವ ಕಲಾಕೃತಿಗಳು ಕೇವಲ ದೇಶದ ಪರಂಪರೆಯನ್ನು ತೋರುವುದಿಲ್ಲ. ಬದಲಾಗಿ ದೇಶದ ನಾಗರಿಕತೆ ಮತ್ತು ಅರಿವಿನ ಮೇಲೆ ಬೆಳಕು ಚೆಲ್ಲುತ್ತವೆ.