ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ಕಣಿವೆಗೆ ಉರುಳಿದ ಬಸ್, 25 ಜನರ ಸಾವು

Last Updated 5 ಅಕ್ಟೋಬರ್ 2022, 11:41 IST
ಅಕ್ಷರ ಗಾತ್ರ

ಪೌಡಿ (ಉತ್ತರಾಖಂಡ): ಮದುವೆ ದಿಬ್ಬಣದ ಬಸ್ಸೊಂದು ಕಂದಕಕ್ಕೆ ಉರುಳಿ 25 ಮಂದಿ ಮೃತಪಟ್ಟು, 20 ಮಂದಿ ತೀವ್ರವಾಗಿ ಗಾಯಗೊಂಡಿರುವುದು ಪೌಡಿ ಗಡವಾಲ್‌ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬಸ್‌ನಲ್ಲಿ ಒಟ್ಟು 45–50 ಮಂದಿ ಪ್ರಯಾಣಿಸುತ್ತಿದ್ದರು.

‘ದಿಬ್ಬಣವುಬೀರೇಂಖಾಲ್‌ನಿಂದ ಹರಿದ್ವಾರದ ಲಾಲ್‌ಧಂಗ್‌ ನಗರಕ್ಕೆ ಹೊರಟಿತ್ತು. ಮಾರ್ಗಮಧ್ಯದ ಪೌಡಿ ಗಡವಾಲ್‌ ಜಿಲ್ಲೆಯ ಸಿಮ್ರಿ ಸಮೀಪ ಮಂಗಳವಾರ ರಾತ್ರಿ ಸುಮಾರು 7 ಗಂಟೆಗೆ 500 ಮೀ ಆಳದ ಕಂದಕಕ್ಕೆ ಬಸ್‌ ಉರುಳಿತು’ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದರು.

‘ರಾತ್ರಿ ಇಡೀ ರಕ್ಷಣಾ ಕಾರ್ಯಾಚರಣೆ ನಡೆದಿದೆ. 18 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 7–8 ಮೃತದೇಹಗಳು ಬಸ್‌ನ ಕೆಳಗೆ ಇರಬಹುದು. ಬಸ್‌ನ ಅವಷೇಶಗಳ ನಡುವೆ ಸಿಲುಕಿದ್ದ 20 ಮಂದಿ ಗಾಯಾಳುಗಳನ್ನು ರಕ್ಷಣೆ ಮಾಡಿ, ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಇಬ್ಬರು ಗಾಯಾಳುಗಳು ಮೃತಪಟ್ಟರು’ ಎಂದು ವಿವರಿಸಿದರು.

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಮತ್ತು ಕೇಂದ್ರದಮಾಜಿ ಸಚಿವ ರಮೇಶ್‌ ಪೋಕ್ರಿಯಾಲ್‌ ಅವರು ಮಂಗಳವಾರವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದರು.

ಅಪಘಾತವನ್ನು ‘ಹೃದಯ ವಿದ್ರಾವಕ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಕುರಿತು ಸಂತಾಪ ಸೂಚಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ಘಟನೆಯು ಅತೀವ ನೋವು ತಂದಿದೆ’ ಎಂದಿದ್ದಾರೆ.

ಫ್ಲ್ಯಾಶ್‌ಲೈಟ್‌ ಬಳಕೆ

ಅಪಘಾತವು ರಾತ್ರಿ ನಡೆದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.

ಈ ವೇಳೆ ಗ್ರಾಮಸ್ಥರೆಲ್ಲಾ ಸೇರಿ, ತಮ್ಮ ಮೊಬೈಲ್‌ಗಳ ಫ್ಲ್ಯಾಶ್‌ಲೈಟ್‌ಗಳನ್ನು ಆನ್‌ ಮಾಡಿ ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಿದರು. ಕೆಲ ಸಮಯದ ಬಳಿಕವಷ್ಟೆ, ಅಧಿಕಾರಿಗಳು ಆಂಬುಲೆನ್ಸ್‌, ಬೆಳಕು ಮತ್ತು ಜೀವ ರಕ್ಷಕಗಳ ವ್ಯವಸ್ಥೆಯನ್ನು ಮಾಡಿದರು ಎಂದರು. ರಾತ್ರಿ ವೇಳೆ ನಡೆಸಿದ ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳನ್ನು ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT