ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಸಮೀಕ್ಷೆಗೆ ವ್ಯತಿರಿಕ್ತ ಫಲಿತಾಂಶ: ಸೋನಿಯಾ ಗಾಂಧಿ

Published 3 ಜೂನ್ 2024, 16:13 IST
Last Updated 3 ಜೂನ್ 2024, 16:13 IST
ಅಕ್ಷರ ಗಾತ್ರ

ನವದೆಹಲಿ/ತಿರುವನಂತಪುರ: ಲೋಕಸಭಾ ಚುನಾವಣೆಯ ಫಲಿತಾಂಶವು ಮತಗಟ್ಟೆ ಸಮೀಕ್ಷೆಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿರಲಿದೆ ಎಂಬ ಬಗ್ಗೆ ತಮ್ಮ ಪಕ್ಷವು ಅತೀವ ವಿಶ್ವಾಸ ಹೊಂದಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೋಮವಾರ ಹೇಳಿದರು.

ಜೂನ್ 4ರ ಫಲಿತಾಂಶದ ಬಗ್ಗೆ ಪಿಟಿಐ ಸೋನಿಯಾ ಅವರನ್ನು ಪ್ರಶ್ನಿಸಿದಾಗ ‘ಕಾದು ನೋಡಿ’ ಎಂದು ಉತ್ತರಿಸಿದರು.

ಲೋಕಸಭಾ ಚುನಾವಣೆಯಲ್ಲಿ 350ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಲಿದ್ದಾರೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಅದನ್ನು ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟದ ಮಿತ್ರ ಪಕ್ಷಗಳು ಟೀಕಿಸಿವೆ.

ಕಾಂಗ್ರೆಸ್‌ಗೆ 295 ಸ್ಥಾನ: ಮತಗಟ್ಟೆ ಸಮೀಕ್ಷೆಗಳು ಜನರ ನಾಡಿಮಿಡಿತವನ್ನು ಹಿಡಿಯುವಲ್ಲಿ ವಿಫಲವಾಗಿವೆ ಎಂದು ಹೇಳಿದ ಕಾಂಗ್ರೆಸ್ ನಾಯಕ ಶಶಿ ತರೂರ್, ‘ಇಂಡಿಯಾ’ ಕೂಟವು 295 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರತಿಪಾದಿಸಿದರು.

‘ನಾವು ಮತಗಟ್ಟೆ ಸಮೀಕ್ಷೆಗಳನ್ನು ಅನುಮಾನ ಮತ್ತು ಅಪನಂಬಿಕೆಯಿಂದ ನೋಡುತ್ತಿದ್ದೇವೆ. ನಾವು ದೇಶದಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದು, ಜನರ ನಾಡಿಮಿಡಿತ ಏನು ಅನ್ನುವುದರ ಬಗ್ಗೆ ನಮಗೆ ಗೊತ್ತಿದೆ. ಅದು ಈ ಸಮೀಕ್ಷೆಗಳಲ್ಲಿ ಯಥಾವತ್ತಾಗಿ ವ್ಯಕ್ತವಾಗಿದೆ ಎನ್ನುವುದನ್ನು ನಾವು ಒಪ್ಪುವುದಿಲ್ಲ’ ಎಂದು ತಿಳಿಸಿದರು.

‘ಕೆಲವು ಸಮೀಕ್ಷೆಗಳಂತೂ ನಗು ತರಿಸುವಂತಿವೆ. ಒಂದು ರಾಜ್ಯದಲ್ಲಿ ಐದು ಸ್ಥಾನಗಳಿದ್ದರೆ, ಬಿಜೆಪಿ ಅಲ್ಲಿ ಆರು ಸ್ಥಾನ ಗೆಲ್ಲಲಿದೆ ಎಂದು ಅವರು ಹೇಳುತ್ತಿದ್ದಾರೆ’ ಎಂದು ಹೇಳಿದರು.

ತಿರುವನಂತಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು, ತಾವು ನಾಲ್ಕನೇ ಬಾರಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಿಸುವ ಪ್ರಯತ್ನ

ಲಖನೌ: ಮತಗಟ್ಟೆ ಸಮೀಕ್ಷೆಗಳ ನಿಖರತೆಯನ್ನು ಪ್ರಶ್ನಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಮೀಕ್ಷೆ ನಡೆಸಿದ ಸಂಸ್ಥೆಗಳು ಬಿಜೆಪಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿವೆ ಎಂದು ಸೋಮವಾರ ಪ್ರತಿಪಾದಿಸಿದರು. 

ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಕೂಟ ಹೆಚ್ಚು ಸ್ಥಾನ ಗಳಿಸಲಿದೆ ಎಂದು ನಮ್ಮ ಮತಗಟ್ಟೆ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ನಾನು ಆಂತರಿಕ ಸಮೀಕ್ಷೆ ನಡೆಸಿದ್ದು ಅದರಲ್ಲಿ ಕೂಡ ನಮಗೆ ಹೆಚ್ಚು ಸ್ಥಾನ ಬರುವುದಾಗಿ ಹೇಳಲಾಗಿದೆ’ ಎಂದು ತಿಳಿಸಿದರು. ಮತಗಟ್ಟೆ ಸಮೀಕ್ಷೆ ನಡೆಸಿದ ಹೆಚ್ಚಿನ ಸಂಸ್ಥೆಗಳು ಬಿಜೆಪಿಯ ಬೂತ್ ನಿರ್ವಹಣೆಯ ಕೆಲಸ ಮಾಡುತ್ತಿದ್ದವು ಎಂದು ಆರೋಪಿಸಿದರು. ಮತ ಎಣಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡಬೇಕು ಎಂದು ಒತ್ತಾಯಿಸಿದ ಅವರು ‘ಬಿಜೆಪಿ ದುರ್ಬಲವಾಗಿ ಕಂಡುಬಂದರೆ ಅವರದ್ದೇ ಆಡಳಿತ ಇರುವುದರಿಂದ ಏಜೆಂಟ್‌ಗಳನ್ನು ಬೆದರಿಸಲು ಪ್ರಯತ್ನಿಸುತ್ತದೆ. ಅವರು ಮತ ಎಣಿಕೆಯನ್ನು ನಿಧಾನಿಸಬಹುದು ಅಥವಾ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು’ ಎಂದು ಆರೋಪಿಸಿದರು.

ಮತಗಟ್ಟೆ ಸಮೀಕ್ಷೆ: ಮಾನಸಿಕ ತಂತ್ರ

ಪಟ್ನಾ: ಮತಗಟ್ಟೆ ಸಮೀಕ್ಷೆಗಳನ್ನು ಒಂದು ‘ಮಾನಸಿಕ ತಂತ್ರ’ ಎಂದು ಬಣ್ಣಿಸಿರುವ ಆರ್‌ಜೆಡಿ 40 ಕ್ಷೇತ್ರಗಳಿರುವ ರಾಜ್ಯದಲ್ಲಿ ‘ಇಂಡಿಯಾ’ ಕೂಟವು 25ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಸೋಮವಾರ ಪ್ರತಿಪಾದಿಸಿದೆ.

‘ಇಂಡಿಯಾ’ ಕೂಟದ ಮಿತ್ರಪಕ್ಷಗಳ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮನೋಜ್ ಕುಮಾರ್ ಝಾ ‘ಇದು ಬೃಹತ್ ಮೊತ್ತದ ಹಣವನ್ನು ಒಳಗೊಂಡಿದೆ. ಷೇರು ಮಾರುಕಟ್ಟೆಯ ಜತೆಗೆ ಇದರಲ್ಲಿ ಪ್ರಧಾನಿ ಕಾರ್ಯಾಲಯವೂ ಪಾಲು ಹೊಂದಿದೆ ಎಂಬುದಾಗಿ ನಮಗೆ ತಿಳಿದುಬಂದಿದೆ’ ಎಂದು ಪ್ರತಿಪಾದಿಸಿದರು. ‘2020ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ವೇಳೆ ನಡೆದಿದ್ದ ‘ಕೈಚಳಕವನ್ನು’ ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್‌’ ವಿಫಲಗೊಳಿಸಿತ್ತು. ಮಂಗಳವಾರದ ಮತ ಎಣಿಕೆಯ ವೇಳೆ ಅಂಥ ಪ್ರಯತ್ನಗಳೇನಾದರೂ ನಡೆದರೆ ಅದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT