ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿನ ವಿಚಾರಣೆಯ ವಿಡಿಯೊ ಚಿತ್ರೀಕರಣವೂ ಕಡ್ಡಾಯ: ಬಾಂಬೆ ಹೈಕೋರ್ಟ್‌

ಎಸ್‌ಸಿ, ಎಸ್‌ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳ ವಿಚಾರಣೆ
Published 13 ಮಾರ್ಚ್ 2024, 15:51 IST
Last Updated 13 ಮಾರ್ಚ್ 2024, 15:51 IST
ಅಕ್ಷರ ಗಾತ್ರ

ಮುಂಬೈ: ಎಸ್‌ಸಿ ಮತ್ತು ಎಸ್‌ಟಿಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ಕುರಿತು ನಡೆಯುವ ನ್ಯಾಯಾಂಗ ವಿಚಾರಣೆ ಸೇರಿದಂತೆ ಎಲ್ಲ ಕಲಾಪಗಳ ವಿಡಿಯೊ ಚಿತ್ರೀಕರಣ ಮಾಡುವುದು ಕಡ್ಡಾಯ ಎಂದು ಬಾಂಬೆ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಎಸ್‌.ವಿ.ಕೊತ್ವಾಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ವಿಚಾರಣೆಯ ವಿಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸುವ ಈ ಕಾಯ್ದೆಯ ಸೆಕ್ಷನ್ 15ಎ(10), ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗಳಿಗೂ ಅನ್ವಯಿಸುತ್ತದೆ’ ಎಂದು ಹೇಳಿದೆ.

‘ಎಸ್‌ಸಿ,ಎಸ್‌ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 15ಎ(10) ಕೈಪಿಡಿಯಲ್ಲ, ಅದು ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸುತ್ತೇವೆ’ ಎಂದು ನ್ಯಾಯಪೀಠ ಹೇಳಿದೆ.

‘ಎಸ್‌ಸಿ,ಎಸ್‌ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಯಾವುದೇ ವಿಚಾರಣೆ ಇರಲಿ, ಅದರ ವಿಡಿಯೊ ಚಿತ್ರೀಕರಣ ನಡೆಸುವುದು ಅಗತ್ಯ. ಸಂತ್ರಸ್ತರು ಹಾಗೂ ಸಾಕ್ಷಿಗಳಿಗೆ ಪ್ರಕರಣ ಕುರಿತು ಮಾಹಿತಿ ಒದಗಿಸಬೇಕು. ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ’ ಎಂದು ಹೇಳಿದೆ.

‘ಸಂತ್ರಸ್ತರು ಹಾಗೂ ಅವರ ಅವಲಂಬಿತರಿಗೆ ಕಾನೂನು ನೆರವು ನೀಡುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳಿಗೂ ಪ್ರಕರಣ ಕುರಿತು ಮಾಹಿತಿ ಒದಗಿಸಬೇಕು’ ಎಂದು ನ್ಯಾಯಪೀಠ ಹೇಳಿದೆ. 

2019ರಲ್ಲಿ ಡಾ.ಪಾಯಲ್‌ ತಾಡ್ವಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಡಾ.ಪಾಯಲ್‌ ಆತ್ಮಹತ್ಯೆ ಮಾಡಿಕೊಳ್ಳಲು ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ವೈದ್ಯರಾದ ಹೇಮಾ ಅಹುಜಾ, ಭಕ್ತಿ ಮೆಹರೆ ಹಾಗೂ ಅಂಕಿತಾ ಖಂಡೇಲ್‌ವಾಲಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ, ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

2019ರಲ್ಲಿ, ಈ ಪ್ರಕರಣವು ಹೈಕೋರ್ಟ್‌ ಮುಂದೆ ಬಂದಾಗ, ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ‘ವಿಚಾರಣೆ’ ಎಂಬ ಪದವನ್ನು ಹೇಗೆ ಅರ್ಥೈಸಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿದ್ದ ನ್ಯಾಯಮೂರ್ತಿ ಸಾಧನಾ ಜಾಧವ್‌, ವಿಷಯವನ್ನು ವಿಭಾಗೀಯ ಪೀಠಕ್ಕೆ ಒಪ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT