ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಎಎಪಿ ಶಾಸಕರಿಗೆ ತಲಾ ₹25 ಕೋಟಿಯ ಆಮಿಷ ಒಡ್ಡಿದ ಬಿಜೆಪಿ: ರಿತುರಾಜ್‌ ಝಾ

Published 1 ಏಪ್ರಿಲ್ 2024, 12:32 IST
Last Updated 1 ಏಪ್ರಿಲ್ 2024, 12:32 IST
ಅಕ್ಷರ ಗಾತ್ರ

ನವದೆಹಲಿ : ‘ನಾನು ಆಮ್‌ ಆದ್ಮಿ (ಎಎಪಿ) ಪಕ್ಷವನ್ನು ಬಿಟ್ಟು ನನ್ನೊಂದಿಗೆ 10 ಎಎಪಿ ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಹೋದರೆ, ಪ್ರತಿಯೊಬ್ಬ ಶಾಸಕರಿಗೂ ₹25 ಕೋಟಿ ನೀಡುವುದಾಗಿ  ಬಿಜೆಪಿ ಆಮಿಷ ಒಡ್ಡಿದೆ’ ಎಂದು ಎಎಪಿ ಶಾಸಕ ರಿತುರಾಜ್‌ ಝಾ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ದೆಹಲಿ ಸರ್ಕಾರವನ್ನು ನಾಶಗೊಳಿಸಲು ಬಯಸಿದೆ. 2013, 2015, 2020ರ ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ 2022ರ ದೆಹಲಿ ಪಾಲಿಕೆ ಚುನಾವಣೆಯಲ್ಲಿ 4 ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿದ ಏಕೈಕ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌. ಇದೀಗ ಮೋದಿ ಮತ್ತೊಮ್ಮೆ ಕೀಳು ಮಟ್ಟದ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ’ ಎಂದರು. 

‘ಬಿಜೆಪಿ ಸೇರುವ ‍ಪ್ರಸ್ತಾಪದೊಂದಿಗೆ ಭಾನುವಾರ ನನ್ನನ್ನು ಸಂಪರ್ಕಿಸಲಾಯಿತು. ಕಳೆದ ನಾಲ್ಕು ದಿನಗಳಿಂದ ನನ್ನನ್ನು ಪ್ರಯತ್ನಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಭಾನುವಾರ ರಾತ್ರಿ 9.15ಕ್ಕೆ ನಾನು ಅವರನ್ನು ಭೇಟಿಯಾದೆ. ಅಲ್ಲಿ ಮೂರ್ನಾಲ್ಕು ಜನರು ಒಂದೆಡೆ ಕರೆದುಕೊಂಡು ಹೋಗಿ, ‘ನೋಡಿ ಒಪ್ಪದೇ ಹೋದರೆ ನಿಮಗೇನೂ ಸಿಗಲಾರದು. ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. 10 ಶಾಸಕರನ್ನು ಕರೆತನ್ನಿ. ಪ್ರತಿಯೊಬ್ಬರಿಗೂ ₹25 ಕೋಟಿ ನೀಡುತ್ತೇವೆ. ಬಿಜೆಪಿ ಸರ್ಕಾರದಲ್ಲಿ ನಿಮ್ಮನ್ನು ಮಂತ್ರಿ ಮಾಡುತ್ತೇವೆ’ ಎಂದು ಆಮಿಷ ಒಡ್ಡಿದರು. ಎಎಪಿ ಶಾಸಕರು ‍‍ಪಕ್ಷವನ್ನು ಬಿಡುವುದಿಲ್ಲ. ಹೀಗಾಗಿ ಬಿಜೆಪಿ ಮತ್ತೆ ‘ಆಪರೇಷನ್‌ ಕಮಲ’ ಆರಂಭಿಸಿದೆ’ ಎಂದು ಆರೋಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ವಿಜೇಂದರ್‌ ಗುಪ್ತಾ, ‘ಬಿಜೆಪಿ ಸೇರಲು ನಿಮಗೆ ಕರೆ ಬಂದ ಬಳಿಕ ನೀವು ಪೊಲೀಸರಿಗೆ ದೂರು ನೀಡಿದ್ದೀರಾ’ ಎಂದು ಪ್ರಶ್ನಿಸಿದರು. ‘ತಮಗೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಈ ಮೊದಲು ಎಎಪಿ ಶಾಸಕರು ಹತ್ತಾರು ಬಾರಿ ಆರೋ‍ಪಿಸಿದ್ದಾರೆ. ನೀವು ಎಷ್ಟು ದಿನ ಸುಳ್ಳು ಹೇಳುತ್ತೀರಿ’ ಎಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT