ಚೂರಲ್ ಮಲ (ವಯನಾಡ್ ಜಿಲ್ಲೆ): ಭೂಕುಸಿತ ಸಂಭವಿಸಿದ ಮೇಪ್ಪಾಡಿ ಸಮೀಪದ ಚೂರಲ್ ಮಲ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಲೆಫ್ಟಿನೆಂಟ್ ಕರ್ನಲ್, ಮಲಯಾಳಂ ಚಿತ್ರನಟ ಮೋಹನ್ ಲಾಲ್ ಶನಿವಾರ ಬೆಳಿಗ್ಗೆ ಭೇಟಿ ನೀಡಿದರು.
ದುರಂತ ಭೂಮಿಯಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 122 ಇನ್ಫಂಟ್ರಿ ಬೆಟಾಲಿಯನ್‌ನ ಲೆಫ್ಟಿನೆಂಟ್ ಕರ್ನಲ್ ಪದವಿಯನ್ನು ವರ್ಷಗಳ ಹಿಂದೆ ಅವರಿಗೆ ಪ್ರದಾನ ಮಾಡಲಾಗಿತ್ತು.
ಸೇನೆಯ ಸಮವಸ್ತ್ರ ಧರಿಸಿಕೊಂಡೇ ಬಂದ ಅವರು ಮೊದಲು ಮೆಪ್ಪಾಡಿಯ ಮೌಂಟ್ ತಾಬೋರ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು.
ನಂತರ ಚೂರಲ್ ಮಲ ಮತ್ತು ಬೆಯ್ಲಿ ಸೇತುವೆ ದಾಟಿ ಮುಂಡಕ್ಕೈ ಗುಡ್ಡ ಮೇಲೆ ತಲುಪಿದರು.
ಮುರಿದು ಬಿದ್ದ ಮನೆಗಳ ಅವಶೇಷಗಳ ನಡುವಿನಿಂದ ಸಾಗಿ ಪುಂಜಿರಿಮಟ್ಟಂ ಭಾಗದಲ್ಲಿ ಆದ ಹಾನಿ ವೀಕ್ಷಿಸಿದರು.
ಚೂರಲ್ ಮಲಕ್ಕೆ ವಾಪಸಾಗಿ ಸೈನಿಕರನ್ನು ಅಭಿನಂದಿಸಿದರು.
ಪರಿಹಾರ ಕಾರ್ಯದಲ್ಲಿ ಸೇನಾಪಡೆಯನ್ನು ಮುನ್ನಡೆಸುತ್ತಿರುವ ಮೇಜರ್ ಜನರಲ್ ಎನ್.ಟಿ.ಮ್ಯಾಥ್ಯು, ನಿರ್ದೇಶಕ ಮೇಜರ್ ರವಿ, ಲೆಫ್ಟಿನೆಂಟ್ ರಾಹುಲ್, ಡಿಫೆನ್ಸ್ ಸೆಕ್ಯುರಿಟಿ ಕೋರ್ ಕಮಾಂಡಂಟ್ ಪೊ.ಎಸ್.ನಗಾರ್, ಕರ್ನಲ್ ಬೆಂಜಿತ್ ಇದ್ದರು.
ಶಾಲೆ ಪುನರ್ನಿರ್ಮಾಣ: ತಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ವಿಶ್ವಶಾಂತಿ ಫೌಂಡೇಷನ್ ವತಿಯಿಂದ ಮುಂಡಕ್ಕೈ ಸರ್ಕಾರಿ ಶಾಲೆಯನ್ನು ಪುನರ್ನಿರ್ಮಾಣ ಮಾಡಲು ₹ 3 ಕೋಟಿ ನೀಡಲಾಗುವುದು ಎಂದು ಮೋಹನ್ ಲಾಲ್ ತಿಳಿಸಿದರು.