ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಯನಾಡ್ ಭೂಕುಸಿತ | ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿ ಪ್ರಕಟ

Published : 4 ಆಗಸ್ಟ್ 2024, 4:29 IST
Last Updated : 4 ಆಗಸ್ಟ್ 2024, 4:29 IST
ಫಾಲೋ ಮಾಡಿ
Comments

ವಯನಾಡ್: ಭೂಕುಸಿತದ ಸ್ಥಳದಲ್ಲಿ ಅವಶೇಷಗಳಡಿಯಿಂದ ಹೊರತೆಗೆದಿರುವ ಕೆಲವು ಮೃತದೇಹಗಳ ಗುರುತು ಹಿಡಿಯಲು ಇನ್ನೂ ಸಾಧ್ಯವಾಗಿಲ್ಲ ಮತ್ತು ಅವುಗಳನ್ನು ಕೊಂಡೊಯ್ಯಲು ಯಾರೂ ಮುಂದೆ ಬಂದಿಲ್ಲ. 

ಅವಶೇಷಗಳಡಿ ದೊರೆತಿರುವ ಮಾನವನ ಅಂಗಾಂಗಗಳು ಮತ್ತು ಇನ್ನೂ ಗುರುತು ಹಿಡಿಯಲು ಆಗದೇ ಇರುವ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.  

ಪ್ರತಿಯೊಂದು ಮೃತದೇಹ ಅಥವಾ ದೇಹದ ಅಂಗಾಂಗಗಳಿಗೆ ನಿರ್ದಿಷ್ಟ ಗುರುತಿನ ಸಂಖ್ಯೆ ನಿಗದಿಪಡಿಸಬೇಕು ಎಂದು ವಿಕೋಪ ನಿರ್ವಹಣಾ ಇಲಾಖೆಯು ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮೃತದೇಹದ ಫೋಟೊ, ವಿಡಿಯೊ ಮತ್ತು ಸಂಗ್ರಹಿಸುವ ಎಲ್ಲ ಮಾದರಿಗಳಲ್ಲಿ (ಹಲ್ಲು, ಡಿಎನ್‌ಎ) ಅದೇ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. 

ಮೃತದೇಹದ ಗುರುತು ಪತ್ತೆ ಹಚ್ಚಿ ಸಂಬಂಧಿಕರಿಗೆ ಹಸ್ತಾಂತರಿಸಲು ಪೊಲೀಸರು ಎಲ್ಲ ಪ್ರಯತ್ನ ಮಾಡಬೇಕು. ಆದರೂ ವಾರಸುದಾರರ ಬಗ್ಗೆ ಮಾಹಿತಿ ಲಭ್ಯವಾಗದಿದ್ದರೆ, ಶವವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದೆ.

‘ಮೃತದೇಹಗಳನ್ನು ಹೂಳುವ ಮೂಲಕ ಅಂತ್ಯಸಂಸ್ಕಾರ ಮಾಡಬೇಕು. ಬೇರೆ ವಿಧಾನದಲ್ಲಿ ಮಾಡುವಂತಿಲ್ಲ. ಹೂಳುವ ಜಾಗದಲ್ಲೂ ಗುರುತಿನ ಸಂಖ್ಯೆ ನಮೂದಿಸಬೇಕು. ಅಂತ್ಯ ಸಂಸ್ಕಾರದ ವೇಳೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಜರಿರಬೇಕು’ ಎಂದು ಸ್ಪಷ್ಟಪಡಿಸಿದೆ.

ಸಂವಹನಕ್ಕೆ ಹ್ಯಾಮ್‌ ರೇಡಿಯೊ ನೆರವು

ಭೂಕುಸಿತದ ಸ್ಥಳದಲ್ಲಿ ಪರಸ್ಪರ ಸಂವಹನಕ್ಕೆ ಹ್ಯಾಮ್‌ ರೇಡಿಯೊದ (ಹವ್ಯಾಸಿ ರೇಡಿಯೊ) ನೆರವು ಪಡೆಯಲಾಗುತ್ತಿದೆ. ಉತ್ಸಾಹಿಗಳ ತಂಡವೊಂದು ಹ್ಯಾಮ್‌ ರೇಡಿಯೊ ಆರಂಭಿಸುವ ಮೂಲಕ ಸಂವಹನ ಜಾಲವನ್ನು ಸ್ಥಾಪಿಸಿದೆ.  ಕಲ್ಪೆಟ್ಟದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ರೇಡಿಯೊ ಕೇಂದ್ರ ಸ್ಥಾಪಿಸಲಾಗಿದ್ದು, ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಜತೆ ಸಂವಹನ ಸಾಧಿಸಲು ನೆರವಾಗಿದೆ.

‘ದುರಂತ ನಡೆದ ಸ್ಥಳದಲ್ಲಿ ಮೊಬೈಲ್ ಫೋನ್ ಸೇವೆ ಬಹಳ ಸೀಮಿತ ಪ್ರಮಾಣದಲ್ಲಿ ಲಭ್ಯವಿವೆ. ಆದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಹ್ಯಾಮ್‌ ರೇಡಿಯೊ ಸಹಾಯ ಮಾಡಿದೆ’ ಎಂದು ಅಧಿಕೃತ ಪ್ರಕಟಣೆ  ಶನಿವಾರ ತಿಳಿಸಿದೆ. ಜಿಲ್ಲಾಧಿಕಾರಿ ಡಿ.ಆರ್‌.ಮೇಘಶ್ರೀ ಅವರು ಹ್ಯಾಮ್‌ ರೇಡಿಯೊ ಆಪರೇಟರ್‌ಗಳನ್ನು ಭೇಟಿಯಾಗಿ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಜೀವನೋಪಾಯಕ್ಕಾಗಿ ಬಂದಿದ್ದರು

ಜೀವನೋಪಾಯಕ್ಕಾಗಿ ಬಿಹಾರದಿಂದ ವಯನಾಡ್‌ಗೆ ಬಂದಿದ್ದವರಲ್ಲಿ ಕೆಲವರು ದುರಂತದಲ್ಲಿ ನಾಪತ್ತೆಯಾಗಿದ್ದು, ಅವರಲ್ಲಿ ರಂಜಿತ್‌ ಕುಮಾರ್‌ ಒಬ್ಬರು. ರಂಜಿತ್‌ ಅವರ ವಿವಾಹವನ್ನು ಮುಂಬರುವ ಅಕ್ಟೋಬರ್‌–ನವೆಂಬರ್‌ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. 

‘ರಂಜಿತ್‌ ಮದುವೆಗೆ ಸಿದ್ದತೆ ನಡೆದಿತ್ತು. ಮದುವೆ ಖರ್ಚಿಗಾಗಿ ಹಣ ಸಂಪಾದಿಸಲು ಕೆಲಸ ಹುಡುಕಿಕೊಂಡು ವಯನಾಡ್‌ಗೆ ಬಂದಿದ್ದರು. ಆದರೆ ಪ್ರಕೃತಿಯು ಬೇರೆಯದೇ ಯೋಜನೆ ಹೊಂದಿತ್ತು’ ಎಂದು ರಂಜಿತ್‌ ಅವರನ್ನು ಹುಡುಕಿಕೊಂಡು ಬಿಹಾರದಿಂದ ಇಲ್ಲಿಗೆ ಬಂದಿರುವ ಅವರ ಸಹೋದರ ರವಿ ಕುಮಾರ್‌ ದುಃಖದಿಂದ ಹೇಳಿದರು. 

‘ಬಿಹಾರದ ಇಬ್ಬರು ಸುರಕ್ಷಿತವಾಗಿದ್ದಾರೆ. ಒಬ್ಬ ಮಹಿಳೆಯ ಮೃತದೇಹ ದೊರೆತಿದೆ. ರಂಜಿತ್‌ ಒಳಗೊಂಡಂತೆ ಇತರ ಮೂವರು ಪತ್ತೆಯಾಗಿಲ್ಲ’ ಎಂದರು.

ಸುರಕ್ಷಿತ ಸ್ಥಳದಲ್ಲಿ ಟೌನ್‌ಷಿಪ್‌ ನಿರ್ಮಾಣ

ತಿರುವನಂತಪುರ: ಭೂಕುಸಿತದಿಂದ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಸುರಕ್ಷಿತ ಪ್ರದೇಶದಲ್ಲಿ ಟೌನ್‌ಶಿಪ್ ಸ್ಥಾಪಿಸಲಾಗುವುದು ಎಂದು ಕೇರಳ ಸರ್ಕಾರ ಶನಿವಾರ ಪ್ರಕಟಿಸಿದೆ.

ಬದುಕುಳಿದವರಿಗೆ ಸಮಗ್ರವಾದ ಪುನವರ್ಸತಿ ಯೋಜನೆಯನ್ನು ರೂಪಿಸಿ, ಕಾರ್ಯಗತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂತ್ರಸ್ತರಿಗೆ ಭೂಮಿ ನೀಡುವ ಮತ್ತು ಮನೆಗಳನ್ನು ನಿರ್ಮಿಸುವ ಕೊಡುಗೆಗಳೊಂದಿಗೆ ಹಲವರು ಮುಂದೆ ಬಂದಿದ್ದಾರೆ ಎಂದು ಹೇಳಿದರು. ಕೊಡುಗೆಗಳನ್ನು ನೀಡುವವರ ಜತೆ ಸಮನ್ವಯ ಸಾಧಿಸಲು ಕಂದಾಯ ಇಲಾಖೆಯ ಜಂಟಿ ಆಯುಕ್ತರ ನೇತೃತ್ವದಲ್ಲಿ ‘ಹೆಲ್ಪ್‌ ಫಾರ್‌ ವಯನಾಡ್’ ಹೆಸರಿನಲ್ಲಿ ಸೆಲ್‌ವೊಂದನ್ನು ಆರಂಭಿಸಲಾಗಿದೆ.

ಭೂಕುಸಿತ ಪ್ರದೇಶದಲ್ಲಿನ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಸಚಿವರು ವಯನಾಡ್‌ಗೆ ಭೇಟಿ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪಕ್ಷದ ವತಿಯಿಂದ 100 ಮನೆಗಳನ್ನು ನಿರ್ಮಿಸಿಕೊಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಹೇಳಿದ್ದಾರೆ. ಅದರಲ್ಲಿ 25 ಮನೆಗಳ ನಿರ್ಮಾಣದ ಜವಾಬ್ದಾರಿಯನ್ನು ಸತೀಶನ್‌ ಅವರೇ ವಹಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ. ಅವರಿಗೆ ಕರೆಮಾಡಿ ಕೃತಜ್ಞತೆ ಸಲ್ಲಿಸಿದ್ದೇನೆ’ ಎಂದರು.

ಇದಲ್ಲದೆ, ಶೋಭಾ ರಿಯಾಲ್ಟಿ ಸಮೂಹ ಮತ್ತು ಕೋಯಿಕ್ಕೋಡ್‌ ಮೂಲದ ಉದ್ಯಮಿಯೊಬ್ಬರು ತಲಾ 25 ಮನೆಗಳನ್ನು ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT