ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿಯದ್ದು ವಸೂಲಿಬಾಜಿ: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ಪ್ರಚಾರ ಕಣದಲ್ಲಿ ತೀವ್ರಗೊಂಡ ವಾಕ್ಸಮರ l ಬಿಜೆಪಿ ಏಟಿಗೆ ಮುಖ್ಯಮಂತ್ರಿ ಮಮತಾ, ಅಭಿಷೇಕ್ ಬ್ಯಾನರ್ಜಿ ತಿರುಗೇಟು
Last Updated 20 ಮಾರ್ಚ್ 2021, 21:11 IST
ಅಕ್ಷರ ಗಾತ್ರ

ಖರಗಪುರ‌/ ಕೋಲ್ಕತ್ತ: ‘ಮಮತಾ ಬ್ಯಾನರ್ಜಿ ಅವರು 10 ವರ್ಷಗಳಲ್ಲಿ ಕೇವಲ ಮತರಾಜಕಾರಣದ ಆಟವಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ. ರಾಜ್ಯದಲ್ಲಿ ಕೇವಲ ವಸೂಲಿಬಾಜಿ ನಡೆಯುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಇಲ್ಲಿ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಮತಾ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ‘ಇಲ್ಲಿನ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ದೇಶದ ಎಲ್ಲೆಡೆ ಕೈಗಾರಿಕೆಗಳಿಗೆ ಸಂಬಂಧಿಸಿದ ಅನುಮತಿ ನೀಡಲು ಬಿಜೆಪಿಯು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಬಂಗಾಳದಲ್ಲಿ ಬೇರೆಯದ್ದೇ ಆದ ಏಕಗವಾಕ್ಷಿ ವ್ಯವಸ್ಥೆ ಇದೆ. ಸೋದರಳಿಯ ಎಂಬ ಏಕಗವಾಕ್ಷಿ ವ್ಯವಸ್ಥೆಯನ್ನು ದಾಟದೇ, ಇಲ್ಲಿ ಯಾವ ಕೆಲಸವೂ ಆಗುವುದಿಲ್ಲ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಗೂಂಡಾಗಳ ಪ್ರತ್ಯೇಕ ವ್ಯವಸ್ಥೆಯೇ ಜಾರಿಯಲ್ಲಿದೆ. ಇವರದ್ದು ಜನರನ್ನು ಸುಲಿಗೆ ಮಾಡುವ ಕೆಲಸ. ಜನರಿಗೆ ಕಳಪೆಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಿ, ವಂಚಿಸಲಾಗುತ್ತಿದೆ. ಇಲ್ಲಿ ಎಲ್ಲದಕ್ಕೂ ‘ಕಮಿಷನ್’ ನೀಡಲೇಬೇಕು. 55 ನಿಮಿಷ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿದ್ದಕ್ಕೆ ಮಮತಾ ದೀದಿ ಬೊಬ್ಬೆಹೊಡೆದರು. ಆದರೆ ಪಶ್ಚಿಮ ಬಂಗಾಳವು 55 ವರ್ಷಗಳಷ್ಟು ಹಿಂದೆ ಉಳಿದಿದೆ. ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದ ಜನರನ್ನು ತಲುಪುವುದನ್ನು ಮಮತಾ ಬ್ಯಾನರ್ಜಿ ಅವರು ತಡೆಯುತ್ತಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ.

‘ಮೋದಿಯದ್ದು, ರೈತರನ್ನು ಕೊಲ್ಲುವ ಅಭಿವೃದ್ಧಿ’

‘ಮೋದಿ ಅವರು ಸದಾ, ‘ಮಮತಾ ಅವರು ಆಟ ಶುರುವಾಯಿತು ಅನ್ನುತ್ತಾರೆ. ನಾವು ಅಭಿವೃದ್ಧಿಯನ್ನು ಆರಂಭಿಸುತ್ತೇವೆ’ ಎನ್ನುತ್ತಾರೆ. ಆದರೆ ರೈತರನ್ನು ಕೊಲ್ಲುವುದೇ ಮೋದಿ ಅವರ ಅಭಿವೃದ್ಧಿ. ₹ 15 ಲಕ್ಷ ನೀಡುತ್ತೇನೆ ಎಂದು ಅವರು ಭರವಸೆ ನೀಡಿದ್ದರು. ನಿಮಗೆ ₹ 15 ಲಕ್ಷ ದೊರೆಯಿತೇ’ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

‘ನೋಟು ರದ್ದತಿಯ ವೇಳೆ 50 ದಿನ ಕೊಡಿ ಸಾಕು ಎಲ್ಲವನ್ನೂ ಬದಲಿಸುತ್ತೇನೆ ಎಂದು ಹೇಳಿದ್ದರು. ವ್ಯವಸ್ಥೆ ಸರಿ ಆಗದಿದ್ದರೆ, ನನ್ನನ್ನು ನೇಣಿಗೆ ಹಾಕಿ ಎಂದೂ ಘೋಷಿಸಿದ್ದರು. ಆದರೆ, ಈಗ ಮತ್ತೆ ಐದು ವರ್ಷ ನೀಡಿ ಎಂದು ನಿಮ್ಮನ್ನು ಕೇಳುತ್ತಿದ್ದಾರೆ. ಮಾತು ಉಳಿಸಿಕೊಳ್ಳುವುದು ಮೋದಿಗೆ ಗೊತ್ತಿಲ್ಲ. ಮೋದಿ ಐದು ವರ್ಷ ಕೇಳುತ್ತಿದ್ದರೆ, ಕೊಟ್ಟ ಮಾತು ಈಡೇರಿಸಲು ಅವರಿಗೆ 500 ವರ್ಷ ಬೇಕು’ ಎಂದು ಅಭಿಷೇಕ್ ಲೇವಡಿ ಮಾಡಿದ್ದಾರೆ.

‘ಮಮತಾ ಬ್ಯಾನರ್ಜಿ ಅವರು ತಮ್ಮ 10 ವರ್ಷದ ಆಡಳಿತದ ರಿಪೋರ್ಟ್ ಕಾರ್ಡ್ ನೀಡುತ್ತಾರೆ. ಮೋದಿಯವರೇ ನಿಮ್ಮ ರಿಪೋರ್ಟ್ ಕಾರ್ಡ್ ಎಲ್ಲಿದೆ? ಈ ಬಗ್ಗೆ ಚರ್ಚೆಗೆ ಬರಲು ನಿಮಗೆ ಸವಾಲು ಹಾಕುತ್ತಿದ್ದೇನೆ. ಭಾಷಣದ ಪ್ರತಿ ಇಲ್ಲದೆ ಕೇವಲ 120 ಸೆಕೆಂಡ್‌ ಬಂಗಾಳದಲ್ಲಿ ಮಾತನಾಡಿ. ನಾನು 2 ಗಂಟೆ ಹಿಂದಿಯಲ್ಲಿ ಮಾತನಾಡುತ್ತೇನೆ. ನೀವೇ ಜಾಗವನ್ನು ಗೊತ್ತುಮಾಡಿ. ನಮ್ಮ ಸಾಧನೆಗಳ ಬಗ್ಗೆ ಚರ್ಚಿಸೋಣ’ ಎಂದು ಅಭಿಷೇಕ್ ಸವಾಲು ಹಾಕಿದ್ದಾರೆ.

‘ಬಿಜೆಪಿ ಜಗತ್ತಿನ ದೊಡ್ಡ ಲೂಟಿಕೋರ’

‘ಬಿಜೆಪಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಲೂಟಿಕೋರ. ಪಿಎಂ ಕೇರ್ಸ್ ನಿಧಿಯ ಅಡಿ ಅವರು ಎಷ್ಟು ಹಣ ಸಂಗ್ರಹಿಸಿದ್ದಾರೆ ಎಂಬುದನ್ನು ನೋಡಿ’ ಎಂದು ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಹಲ್ದಿಯಾದಲ್ಲಿ ಟಿಎಂಸಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಮಮತಾ ಅವರು, ಮೋದಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಗಲಭೆಮುಕ್ತ ಮತ್ತು ಶಾಂತಿಯುತ ಬಂಗಾಳ ಬೇಕಿದ್ದರೆ, ನಿಮ್ಮೆದುರು ಇರುವ ಏಕೈಕ ಆಯ್ಕೆ ಟಿಎಂಸಿ’ ಎಂದು ಅವರು ಹೇಳಿದ್ದಾರೆ.

‘ಸುವೇಂದು ಅಧಿಕಾರಿ 2014ರಿಂದ ಬಿಜೆಪಿ ಸಂಪರ್ಕದಲ್ಲಿ ಇದ್ದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಇಂತಹ ವಂಚಕರೆಲ್ಲರೂ ಈಗ ಟಿಎಂಸಿ ತ್ಯಜಿಸಿದ್ದಾರೆ. ನಂದಿಗ್ರಾಮವನ್ನು ಈಗ ಹೇಗೆ ಅಭಿವೃದ್ಧಿಪಡಿಸುತ್ತೇವೆ ಎಂಬುದನ್ನು ನೋಡಿ’ ಎಂದು ಅವರು ಹೇಳಿದ್ದಾರೆ.

ನುಡಿ-ಕಿಡಿ

70 ವರ್ಷಗಳಿಂದ ಕಾಂಗ್ರೆಸ್ ನಿಮ್ಮನ್ನು ಹಿಂಡಿಹಿಪ್ಪೆಮಾಡಿದೆ, ಎಡಪಕ್ಷಗಳು ನಿಮ್ಮನ್ನು ಹದಗೆಡೆಸಿವೆ, ಟಿಎಂಸಿ ನಿಮ್ಮ ಕನಸುಗಳನ್ನು ಅಪಹರಿಸಿದೆ. ಬಿಜೆಪಿಗೆ ಕೇವಲ ಐದು ವರ್ಷ ಕೊಡಿ. ಈ ಎಲ್ಲಾ ಪಕ್ಷಗಳು ಹಾಳುಮಾಡಿರುವುದನ್ನು ನಾವು ಸರಿಪಡಿಸುತ್ತೇವೆ. ಸುವರ್ಣ ಬಂಗಾಳವನ್ನು ಸೃಷ್ಟಿಸುತ್ತೇವೆ.

–ನರೇಂದ್ರ ಮೋದಿ, ಪ್ರಧಾನಿ

ಪಶ್ಚಿಮ ಬಂಗಾಳಕ್ಕೆ ಬಂದಾಗಲೆಲ್ಲಾ ಮೋದಿ ಅವರು ಸುವರ್ಣ ಬಂಗಾಳ ಮಾಡುತ್ತೇವೆ ಎಂದು ಘೋಷಿಸುತ್ತಾರೆ. ಅವರು ಭಾರತವನ್ನೇಕೆ ಸುವರ್ಣ ಭಾರತವನ್ನಾಗಿ ಮಾಡಿಲ್ಲ. ಅವರ ಸರ್ಕಾರವಿರುವ ತ್ರಿಪುರಾ ಏಕೆ ಇನ್ನೂ ಸುವರ್ಣ ತ್ರಿಪುರಾ ಆಗಿಲ್ಲ

–ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಸಂಸದ

ಮೋದಿ ಅವರು ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ. ಏಳು ವರ್ಷದಲ್ಲಿ ಏನು ಮಾಡಿದ್ದಾರೆ? ಈಗ ತಮ್ಮ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಿಸುತ್ತಿದ್ದಾರೆ. ಅಲ್ಲದೆ, ರವೀಂದ್ರನಾಥ್ ಟ್ಯಾಗೋರ್ ಆಗಲು ಯತ್ನಿಸುತ್ತಿದ್ದಾರೆ. ಮುಂದೊಂದು ದಿನ ದೇಶಕ್ಕೂ ತಮ್ಮದೇ ಹೆಸರು ಇಡುತ್ತಾರೆ.

–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT