ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ: ಪ್ರಧಾನಿ ನರೇಂದ್ರ ಮೋದಿ

ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಸ್ಥಿರತೆ * ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ವಾಗ್ದಾಳಿ
Published : 25 ಸೆಪ್ಟೆಂಬರ್ 2024, 14:40 IST
Last Updated : 25 ಸೆಪ್ಟೆಂಬರ್ 2024, 14:40 IST
ಫಾಲೋ ಮಾಡಿ
Comments

ಸೋನಿಪತ್‌ (ಪಿಟಿಐ): ‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಧಿಕಾರಕ್ಕಾಗಿ ಆಂತರಿಕ ಕಲಹ ನಡೆಯುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಹರಿಯಾಣದ ಸೋನಿಪತ್‌ ಜಿಲ್ಲೆಯ ಗೊಹಾನಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಎಲ್ಲೆಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲ ಅಧಿಕಾರಕ್ಕಾಗಿ ಆಂತರಿಕ ಕಲಹ ನಡೆಯುತ್ತಲೇ ಇವೆ. ಇದಕ್ಕೆ ಕಾಂಗ್ರೆಸ್‌ ಆಡಳಿತದಲ್ಲಿರುವ ಕರ್ನಾಟಕವೇ ನಿದರ್ಶನ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಇದೇ ಕತೆ’ ಎಂದರು.

ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೂ ಆಂತರಿಕ ಕಲಹ ಜೋರಾಗಿತ್ತು ಎಂದ ಅವರು, ‘ಹರಿಯಾಣದ ಜನರು ಎಚ್ಚರದಿಂದ ಇರಬೇಕು. ಇಲ್ಲೇನಾದರೂ ತಪ್ಪಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಂತಃ ಕಲಹಗಳ ಮೂಲಕ ಅಸ್ಥಿರತೆ ಮೂಡುತ್ತದೆ. ಅದು ಈಗಾಗಲೇ ಹರಿಯಾಣ ಕಾಂಗ್ರೆಸ್‌ನಲ್ಲಿ ಗೋಚರಿಸುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಪಣಕ್ಕಿಟ್ಟಂತೆ. ಅದರಿಂದ ರಾಜ್ಯವೇ ಹಾಳಾಗುತ್ತದೆ’ ಎಂದ ಅವರು, ಅದಕ್ಕೆ ಅವಕಾಶ ನೀಡಬೇಡಿ ಎಂದರು.

‘ಕಾಂಗ್ರೆಸ್‌ ಅಧಿಕಾರದಿಂದ ಹೊರಗುಳಿದಾಗೆಲ್ಲ ಬಡವರು, ಎಸ್‌.ಸಿ, ಎಸ್‌.ಟಿ ಮತ್ತು ಒಬಿಸಿ ಸಮುದಾಯದವರಿಗೆ ಅವರ ಹಕ್ಕುಗಳು ದೊರೆತಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗೆಲ್ಲ ದಲಿತರು ಮತ್ತು ತಳವರ್ಗದವರ ಹಕ್ಕುಗಳನ್ನು ಕಸಿದಿದೆ’ ಎಂದು ಹೇಳಿದರು.

ಮೀಸಲಾತಿಯನ್ನು ವಿರೋಧಿಸುವುದು ಮತ್ತು ದ್ವೇಷಿಸುವುದು ಕಾಂಗ್ರೆಸ್‌ನ ಡಿಎನ್‌ಎಯಲ್ಲಿಯೇ ಇದೆ ಎಂದು ಮೋದಿ ಟೀಕಿಸಿದರು.

ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್‌ 8ರಂದು ಮತ ಎಣಿಕೆ ನಡೆಯಲಿದೆ.

ಹರಿಯಾಣದ ಸೋನಿಪತ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಗದೆ ನೀಡಿ ಗೌರವಿಸಿದರು –ಪಿಟಿಐ ಚಿತ್ರ
ಹರಿಯಾಣದ ಸೋನಿಪತ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಗದೆ ನೀಡಿ ಗೌರವಿಸಿದರು –ಪಿಟಿಐ ಚಿತ್ರ

ರೈತರಿಗೆ ಬಿಜೆಪಿ ಮೇಲೆ ನಂಬಿಕೆಯಿಲ್ಲ’

ನವದೆಹಲಿ (ಪಿಟಿಐ): ಬಿಜೆಪಿ ಮೇಲಿನ ನಂಬಿಕೆಯನ್ನು ಹರಿಯಾಣದ ರೈತರು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದಿರುವ ಕಾಂಗ್ರೆಸ್‌ ರಾಜ್ಯದ ಕೃಷಿಕರಿಗೆ ಯೋಗ್ಯವಾದ ಜೀವನ ಖಚಿತಪಡಿಸಲು ಬಿಜೆಪಿ ಏನು ಮಾಡುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತಿಳಿಸಬೇಕು ಎಂದು ಒತ್ತಾಯಿಸಿದರು. ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಅವರು ಈ ಕುರಿತು ವಿವರಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಬುಧವಾರ ಆಗ್ರಹಿಸಿದರು. ರೈತರ ಪ್ರತಿಭಟನೆಗಳ ಬಳಿಕ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ಪ್ರಧಾನಿ ಅವರು ಆ ವೇಳೆ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ಪ್ರಧಾನಿ ಭರವಸೆಗಳನ್ನು ನೀಡಿದ ನಂತರವೇ ರೈತರು ಪ್ರತಿಭಟನೆಯನ್ನು 2021ರಲ್ಲಿ ಹಿಂಪಡೆದಿದ್ದರು. ಆದರೆ ಕ್ರಮೇಣ ಮೋದಿ ಸರ್ಕಾರವು ರೈತರ ಜತೆ ಸಂವಾದ ನಡೆಸುವುದನ್ನು ನಿಧಾನಗೊಳಿಸಿತು. ಅಲ್ಲದೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವ ಕುರಿತು ಚರ್ಚಿಸಲು ರಚಿಸಲಾಗಿದ್ದ ಸಮಿತಿಯೂ ಪಕ್ಷಪಾತಿಯಾಗಿತ್ತು. ಅದರ ಸ್ವತಂತ್ರ ಸದಸ್ಯರೊಬ್ಬರು ತ್ವರಿತವಾಗಿ ರಾಜೀನಾಮೆಯನ್ನೂ ನೀಡಿದರು ಎಂದು ಅವರು ಹೇಳಿದರು. ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸದ ಕುರಿತು ರೈತ ಸಂಘಟನೆಗಳು ಪುನಃ ಹೋರಾಟಕ್ಕೆ ಬೀದಿಗಿಳಿದವು. ಅವರ ಮಾತು ಕೇಳಬೇಕಾದ ಸರ್ಕಾರ ಅವರ ಮೇಲೆ ಲಾಠಿ ಪ್ರಹಾರ ನಡೆಸಿ ಅಶ್ರಯವಾಯು ಪ್ರಯೋಗಿಸಿತು ಎಂದ ಅವರು ರೈತರ ಕಷ್ಟವನ್ನು ಬಿಜೆಪಿ ಏಕೆ ನಿರ್ಲಕ್ಷಿಸುತ್ತಿದೆ ಎಂದು ಪ್ರಶ್ನಿಸಿದರು. ಆದರೆ ಕಾಂಗ್ರೆಸ್‌ ರೈತ ಪರವಾಗಿದ್ದು ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳ ಅನ್ವಯ ಎಂಎಸ್‌ಪಿ ಜಾರಿಗೊಳಿಸುವ ಮತ್ತು ಅದಕ್ಕೆ ಕಾನೂನಿನ ಖಾತರಿ ನೀಡುವ ಭರವಸೆ ನೀಡಿದೆ. ಅದರ ಜತೆಗೆ ರೈತರ ಸಾಲ ಮನ್ನಾ ಮತ್ತು 30 ದಿನಗಳಲ್ಲಿ ಬೆಳೆ ವಿಮೆ ಪಾವತಿಯ ಭರವಸೆಯನ್ನೂ ನೀಡುತ್ತದೆ ಎಂದರು.

ಮೊದಲ ಮಹಿಳಾ ಅಭ್ಯರ್ಥಿ ಕಣಕ್ಕೆ

ನೂಹ್‌ (ಪಿಟಿಐ): ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ನೂಹ್‌ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರ. ಇಲ್ಲಿ ಮಹಿಳೆಯರು ಶಿರವಸ್ತ್ರ ಧರಿಸದೇ ನಡೆದಾಡುವುದೇ ಅಪರೂಪ. ಇದೇ ಮೊದಲ ಬಾರಿಗೆ ಇಲ್ಲಿ ಮಹಿಳೆಯೊಬ್ಬರು ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದು ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಗುರುಗ್ರಾಮದ ಉದ್ಯಮಿ ರಬಿಯಾ ಕಿದ್ವಾಯಿ (34) ಇಲ್ಲಿ ಚುನಾವಣಾ ಸ್ಪರ್ಧೆಗಿಳಿದಿರುವ ಮಹಿಳೆ. ಕ್ಷೇತ್ರದಲ್ಲಿ ತನಗೆ ಎದುರಾಗಲಿರುವ ಸವಾಲುಗಳ ಬಗ್ಗೆ ಅರಿವಿರುವ ಅವರು ಮತದಾರರು ತನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಮಾಜಿ ರಾಜ್ಯಪಾಲ ಅಖ್ಲಾಕ್‌ ಉರ್‌ ರೆಹಮಾನ್‌ ಕಿದ್ವಾಯಿ ಅವರ ಮೊಮ್ಮಗಳಾದ ರಬಿಯಾ ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಕಣಕ್ಕಿಳಿದಿದ್ದಾರೆ. ಅವರಿಗೆ ಕಠಿಣ ಪ್ರತಿಸ್ಪರ್ಧಿಯಾಗಿ ಸ್ಥಳೀಯರಾದ ಕಾಂಗ್ರೆಸ್‌ನ ಶಾಸಕ ಅಫ್ತಾಬ್‌ ಅಹ್ಮದ್‌ ಮತ್ತು ಇಂಡಿಯನ್‌ ನ್ಯಾಷನಲ್‌ ಲೋಕದಳ ಪಕ್ಷದ ತಾಹಿರ್‌ ಹುಸೇನ್‌ ಅಖಾಡದಲ್ಲಿದ್ದಾರೆ. ಅನುಭವಿ ಪ್ರತಿಸ್ಪರ್ಧಿಗಳ ಹೊರತಾಗಿಯೂ ರಬಿಯಾ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಲಿಂಗಭೇದ ಆಳವಾಗಿ ಬೇರೂರಿದೆ. ಜತೆಗೆ ಅವರು ಹೊರಗಿನವರೂ ಆಗಿದ್ದಾರೆ. ಅಲ್ಲದೆ ಮತದಾರರಲ್ಲಿ ಸಾಮಾನ್ಯ ಅರಿವು ಮತ್ತು ಶಿಕ್ಷಣದ ಕೊರತೆಯೂ ಇದೆ. ‘ನಾನು ಸ್ಥಳೀಯ ನಿವಾಸಿ ಅಲ್ಲದಿರಬಹುದು. ಆದರೆ ಇಲ್ಲಿ ಹೆಚ್ಚಿನ ಜನರಿರುವ ಸಮುದಾಯಕ್ಕೆ ಸೇರಿದವಳು ನಾನು. ಮಹಿಳೆಯರೂ ಸೇರಿದಂತೆ ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಧ್ವನಿಯಾಗಲು ಬಯಸಿದ್ದೇನೆ. ಗುರುಗ್ರಾಮದ ರೀತಿಯಲ್ಲಿ ನೂಹ್‌ ಅನ್ನು ಅಭಿವೃದ್ಧಿಪಡಿಸಲು ಬಯಸಿದ್ದೇನೆ’ ಎಂದು ರಬಿಯಾ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT