ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರ ಬೇಳೆಕಾಳು ಮಾರಾಟಕ್ಕೂ ಆನ್‌ಲೈನ್‌ ವ್ಯವಸ್ಥೆ ವಿಸ್ತರಣೆ: ಪ್ರಧಾನಿ ಮೋದಿ

Published 8 ಜನವರಿ 2024, 15:10 IST
Last Updated 8 ಜನವರಿ 2024, 15:10 IST
ಅಕ್ಷರ ಗಾತ್ರ

ನವದೆಹಲಿ: ತೊಗರಿಯನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ಜಾರಿಗೊಳಿಸಲಾಗಿರುವ ವ್ಯವಸ್ಥೆಯನ್ನು ಇತರ ಬೇಳೆಕಾಳುಗಳನ್ನು ಮಾರಾಟ ಮಾಡುವುದಕ್ಕೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.

‘ಬೇಳೆ ಕಾಳುಗಳ ಖರೀದಿಗಾಗಿ ವ್ಯಯಿಸುವ ಹಣವು ಬೇರೆ ದೇಶಗಳಿಗೆ ಹೋಗದೇ, ಅದು ನಮ್ಮ ರೈತರಿಗೇ ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಹೇಳಿದರು.

ದೇಶದ ವಿವಿಧೆಡೆ ಹಮ್ಮಿಕೊಂಡಿದ್ದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯನ್ನು ವರ್ಚುವಲ್‌ ಆಗಿ ಉದ್ದೇಶಿಸಿ ಅವರು ಮಾತನಾಡಿದರು.

‘ಆನ್‌ಲೈನ್‌ ಮೂಲಕ ತೊಗರಿ ಮಾರಾಟ ಮಾಡುವುದಕ್ಕೆ ಜಾರಿಗೊಳಿಸಿರುವ ಈ ವ್ಯವಸ್ಥೆಯಿಂದ ರೈತರು ತಮ್ಮ ಕೃಷಿ ಉತ್ಪನ್ನವನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಈ ವ್ಯವಸ್ಥೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಇರುತ್ತದೆ’ ಎಂದು ಮೋದಿ ಹೇಳಿದರು.

‘ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿರಲಿಲ್ಲ. ಕೃಷಿ ಉತ್ಪಾದನೆ ಹಾಗೂ ಮಾರಾಟಕ್ಕೆ ಮಾತ್ರ ಚರ್ಚೆ ನಡೆಸಲಾಗುತ್ತಿತ್ತು. ಆದರೆ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿತ್ತು’ ಎಂದು ಹೇಳಿದರು.

‘ನಮ್ಮ ಸರ್ಕಾರ ರೈತರು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆ ನಿವಾರಣೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ’ ಎಂದರು. 

ಯಾತ್ರೆ ಉದ್ದೇಶ: ‘ಯಾವ ಫಲಾನುಭವಿಯೂ ಸರ್ಕಾರದ ಯೋಜನೆಗಳಿಂದ ಹೊರಗುಳಿಯುವುದಿಲ್ಲ ಎಂಬುದನ್ನು ಖಾತ್ರಿಪಡಿಸುವುದೇ ಈ ಯಾತ್ರೆಯ ಮುಖ್ಯ ಉದ್ದೇಶ’ ಎಂದು ಪ್ರಧಾನಿ ಮೋದಿ ಹೇಳಿದರು.

‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು

‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು

–ಪಿಟಿಐ ಚಿತ್ರ 

‘ದೇಶದೆಲ್ಲೆಡೆ ಮೋದಿ ಕಿ ಗ್ಯಾರಂಟಿ ಗಾಡಿ ಸಂಚಾರ’

‘ಮೋದಿ ಅವರ ಗ್ಯಾರಂಟಿ ಗಾಡಿ (ಮೋದಿ ಕಿ ಗ್ಯಾರಂಟಿ ವಾಲಿ ಗಾಡಿ) ದೇಶದ ಪ್ರತಿಯೊಂದು ಮೂಲೆಗೂ ಹೋಗಲಿದೆ. ಫಲಾನುಭವಿಗಳ ಮನೆ ಬಾಗಿಲಿಗೇ ಸರ್ಕಾರ ಹೋಗಲಿದ್ದು ತ್ವರಿತವಾಗಿ ಯೋಜನೆಯ ಲಾಭವನ್ನು ತಲುಪಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನಭವಿಗಳೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು ‘ಯಾತ್ರೆಯು 50 ದಿನಗಳನ್ನು ಪೂರೈಸಿದ್ದು 11 ಕೋಟಿ ಜನರೊಂದಿಗೆ ಮುಖಾಮುಖಿಯಾಗಿದೆ’ ಎಂದರು. ‘ಮೋದಿ ಗ್ಯಾರಂಟಿ ಗಾಡಿಯೊಂದಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹ ಜನರ ಬಳಿ ಹೋಗುತ್ತಿದ್ದಾರೆ. ಈ ಯಾತ್ರೆ ಆರಂಭಗೊಂಡ ನಂತರ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಕೋರಿ ಹೊಸದಾಗಿ 12 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ’ ಎಂದು ಹೇಳಿದ ಅವರು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಒದಗಿಸಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT