ನವದೆಹಲಿ: ‘ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗಷ್ಟೇ ಕ್ಷಮೆ ಏಕೆ? ರಾಜ್ಯದಲ್ಲಿರುವ ಉಳಿದ ಅಪರಾಧಿಗಳಿಗೂ ಈ ಮಾನದಂಡ ಪಾಲಿಸಬೇಕಲ್ಲವೇ?’ ಎಂದು ಸುಪ್ರೀಂ ಕೋರ್ಟ್ ಗುರುವಾರ ಗುಜರಾತ್ ಸರ್ಕಾರಕ್ಕೆ ಚಾಟಿ ಬೀಸಿದೆ.
ಬಿಲ್ಕಿಸ್ ಬಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅಪಾಯಕಾರಿ ಸನ್ನಿವೇಶಕ್ಕೆ ಅವಕಾಶ ಮಾಡಿಕೊಡುವಂತಹ ಹಾಗೂ ಮನಸ್ಸಿಗೆ ತೋಚಿದ ನಿರ್ಧಾರ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಪ್ರಕರಣದ 11 ಅಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು.
‘ಅವಧಿ ಪೂರ್ಣಗೊಳ್ಳುವ ಮೊದಲೇ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಕ್ಷಮಾಪಣೆ ನೀತಿಯನ್ನು ಆಯ್ದ ಅಪರಾಧಿಗಳಿಗಷ್ಟೇ ಅನ್ವಯಿಸುವುದು ಸರಿಯಲ್ಲ. ಸಮಾಜದೊಂದಿಗೆ ಮತ್ತೆ ಬೆರೆಯಲು ಉಳಿದ ಅಪರಾಧಿಗಳಿಗೂ ಈ ಮಾನದಂಡ ಪಾಲಿಸಬೇಕಿದೆ’ ಎಂದು ಅಭಿಪ್ರಾಯಪಟ್ಟಿತು.
ಗುಜರಾತ್ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠವು, ‘ಉಳಿದವರಿಗೂ ಸರ್ಕಾರದ ಈ ನೀತಿ ಅನ್ವಯಿಸಲು ಏಕೆ ಸಾಧ್ಯವಾಗುವುದಿಲ್ಲ’ ಎಂದು ಪ್ರಶ್ನಿಸಿತು.
‘2002ರ ಗುಜರಾತ್ ದಂಗೆ ವೇಳೆ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಜೊತೆಗೆ, ಆಕೆಯ ಕುಟುಂಬದ ಹತ್ಯೆಯಾಗಿದೆ. ಈ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮರಣದಂಡನೆ ನಂತರದ ಎರಡನೇ ಅತಿದೊಡ್ಡ ಶಿಕ್ಷೆ ಇದಾಗಿದೆ. ಇಂತಹ ಸಂದರ್ಭದಲ್ಲಿಯೂ ಅವರನ್ನು ಅವಧಿಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಲು ಹೇಗೆ ಸಾಧ್ಯ? ಎಂದು ಕೇಳಿತು.
‘ಕೇವಲ ಆಯ್ದವರಿಗಷ್ಟೇ ಸರ್ಕಾರದ ಕ್ಷಮಾಪಣೆ ನೀತಿಯನ್ನು ಅನ್ವಯಿಸುವುದು ಏಕೆ, ಜೀವನವನ್ನು ಮತ್ತೆ ಸುಧಾರಿಸಿಕೊಳ್ಳಲು ಉಳಿದವರಿಗೂ ಅವಕಾಶ ನೀಡಬೇಕಲ್ಲವೇ, 14 ವರ್ಷಗಳ ನಂತರ ಈ ವಿನಾಯಿತಿ ನಿರ್ಧಾರ ತಳೆದಿರುವುದು ಏಕೆ’ ಎಂದು ಪ್ರಶ್ನಿಸಿತು.
‘ಅಪರಾಧಿಗಳ ಬಿಡುಗಡೆಯು ರಾಜ್ಯ ಸರ್ಕಾರದ ಕ್ಷಮಾಪಣೆ ನೀತಿಯನ್ನು ಅವಲಂಬಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, 1992ರಲ್ಲಿ ಗುಜರಾತ್ ಸರ್ಕಾರ ರೂಪಿಸಿರುವ ಈ ನೀತಿ ಆಧರಿಸಿ ಅಪರಾಧಿಗಳಿಗೆ ಕ್ಷಮಾಪಣೆ ನೀಡಲಾಗಿದೆ. ಈ ಪ್ರಕ್ರಿಯೆಯು ಕಾನೂನುಬದ್ಧವಾಗಿಯೇ ನಡೆದಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಸಮರ್ಥಿಸಿಕೊಂಡರು.
ಘೋರ ಅಪರಾಧ ಎಸಗಿದ ಅಪರಾಧಿಗಳ ಸುಧಾರಣೆಗೂ ಕಾನೂನಿನಡಿ ಅವಕಾಶ ಕಲ್ಪಿಸಬಹುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಜೈಲು ಸಲಹಾ ಸಮಿತಿಯ (ಸಮಿತಿಯಲ್ಲಿ ಇಬ್ಬರು ಬಿಜೆಪಿ ಶಾಸಕರು ಇದ್ದರು ಎಂಬ ಆರೋಪವಿದೆ) ವರದಿ ಕೇಳಿತು. ಬಳಿಕ ‘ಅಪರಾಧಿಗಳಿಗೆ ಕ್ಷಮಾಪಣೆ ನೀಡುವ ಬಗ್ಗೆ ಅಭಿಪ್ರಾಯ ಪಡೆಯುವಾಗ ಸಿಬಿಐ ಕೂಡ ಆಕ್ಷೇಪ ವ್ಯಕ್ತಪಡಿಸಲಿಲ್ಲವೇ’ ಎಂದು ಪ್ರಶ್ನಿಸಿತು. ನಂತರ ಆಗಸ್ಟ್ 24ಕ್ಕೆ ವಿಚಾರಣೆಯನ್ನು ಮುಂದೂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.