ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರವರ ರಾವ್ ಸೇರಿ ಐವರು ಹೋರಾಟಗಾರರ ಗೃಹಬಂಧನ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಕೇಂದ್ರ ಸರ್ಕಾರದ ವಾದ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ
Last Updated 17 ಸೆಪ್ಟೆಂಬರ್ 2018, 8:55 IST
ಅಕ್ಷರ ಗಾತ್ರ

ನವದೆಹಲಿ: ನಕ್ಸಲರ ಜತೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿಸಲಾದ ಐವರು ಹೋರಾಟಗಾರರ ಗೃಹ ಬಂಧನದ ಅವಧಿಯನ್ನು ಸುಪ್ರೀಂ ಕೋರ್ಟ್‌ ಇದೇ ತಿಂಗಳ 19ರ ವರೆಗೆ ವಿಸ್ತರಿಸಿದೆ. ಹೋರಾಟಗಾರರ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನೂ 19ರಂದೇ ನಡೆಸಲಿದೆ.

ತೆಲುಗು ಲೇಖಕ ವರವರ ರಾವ್ ಸೇರಿ ಐವರು ಹೋರಾಟಗಾರರ ಬಿಡುಗಡೆಗೆ ಮನವಿ ಮಾಡಿ ಇತಿಹಾಸಜ್ಞೆ ರೊಮಿಲಾ ಥಾಪರ್ ಮತ್ತು ಇತರ ನಾಲ್ವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದೆ.

‘ಅಗತ್ಯವಿದ್ದಲ್ಲಿ ಮಧ್ಯ‍ಪ್ರವೇಶಿಸುತ್ತೇವೆ’: ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್‌ ಹಂತದ ವಿಚಾರಣೆ ನಡೆಯುತ್ತಿರುವಾಗ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಬಾರದು. ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದೇ ಆದರೆ, ಅದು ಅಪಾಯಕಾರಿಯಾಗಿರಲಿದೆ ಎಂದು ಕೇಂದ್ರ ಸರ್ಕಾರ ವಾದಿಸಿತು. ಇದನ್ನು ತಿರಸ್ಕರಿಸಿದ ನ್ಯಾಯಪೀಠ, ‘ನಾವು ಪೊಲೀಸ್ದಾಖಲೆಗಳನ್ನು ನೋಡಬೇಕು. ಪ್ರಕರಣದಲ್ಲಿ ಹುರುಳಿಲ್ಲ ಎಂದಾದಲ್ಲಿ ನಾವೇ ಅದನ್ನು ರದ್ದು ಮಾಡುತ್ತೇವೆ. ಅಗತ್ಯಬಿದ್ದಲ್ಲಿ ಮಧ್ಯ ಪ್ರವೇಶಿಸುತ್ತೇವೆ’ ಎಂದು ಹೇಳಿತು.

ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.

ಹೋರಾಟಗಾರರನ್ನು ಬಂಧಿಸಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಪ್ರಶ್ನಿಸಿತ್ತು. ಅಲ್ಲದೆ, ಬಂಧಿತರೆಲ್ಲ ಗೌರವಾನ್ವಿತ ನಾಗರಿಕರು. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ ಎಂದು ಹೇಳಿತ್ತು.

ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಮತ್ತು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದವರ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ತೆಲುಗು ಲೇಖಕ ವರವರ ರಾವ್ ಮತ್ತು ಇತರ ಹೋರಾಟಗಾರರ ಮನೆ ಮೇಲೆ ಆಗಸ್ಟ್‌ 28ರಂದು ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದರು.ವರವರ ರಾವ್, ಸುಧಾ ಭಾರದ್ವಾಜ್, ಗೌತಮ್ ನವಾಲಖಾ, ವರ್ನಾನ್ ಗೋನ್ಸಾಲ್ವೆಸ್, ಅರುಣ್ ಫೆರೇರಾ ಅವರನ್ನು ಬಂಧಿಸಲಾಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT