ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಇಲ್ಲದ INDIA ಮೈತ್ರಿಕೂಟ ಊಹಿಸುವುದೂ ಅಸಾಧ್ಯ: ಕಾಂಗ್ರೆಸ್‌

Published 24 ಜನವರಿ 2024, 11:07 IST
Last Updated 24 ಜನವರಿ 2024, 11:07 IST
ಅಕ್ಷರ ಗಾತ್ರ

ಬೊಂಗೈಗಾಂವ್(ಅಸ್ಸಾಂ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲದೆ ಇಂಡಿಯಾ ಮೈತ್ರಿಕೂಟದ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಟಿಎಂಸಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ ವಲಯದಿಂದ ಈ ಹೇಳಿಕೆ ಹೊರಬಂದಿದೆ.

ಭಾರತ್ ಜೋಡೊ ನ್ಯಾಯ ಯಾತ್ರೆಯ ಭಾಗವಾಗಿ ಅಸ್ಸಾಂನ ಉತ್ತರ ಸಲ್ಮಾರಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್‌ ರಮೇಶ್, ‘ಟಿಎಂಸಿ ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಮುಖ ಆಧಾರಸ್ತಂಭವಾಗಿದೆ’ ಎಂದರು.

‘ಮಮತಾ ಬ್ಯಾನರ್ಜಿ ಅವರನ್ನು ಬಿಟ್ಟು ಇಂಡಿಯಾ ಮೈತ್ರಿಕೂಟ ಇಲ್ಲ. ಇಂಡಿಯಾ ಮೈತ್ರಿಕೂಟವು ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸಾಗಲಿದ್ದೇವೆ’ ಎಂದು ತಿಳಿಸಿದರು.

‘ಬಿಜೆಪಿಯನ್ನು ಸೋಲಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಬ್ಯಾನರ್ಜಿ ಹೇಳಿದ್ದರು. ಈ ಉದ್ದೇಶದಿಂದಲೇ ನಮ್ಮ 'ಭಾರತ್ ಜೋಡೊ ನ್ಯಾಯ ಯಾತ್ರೆ' ನಾಳೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಲಿದೆ’ ಎಂದು ಹೇಳಿದರು.

‘ನಾವು ರಸ್ತೆಯಲ್ಲಿ ಸಾಗುತ್ತಿರುವಾಗ ಕೆಂಪು ದೀಪಗಳು ಹಾಗೂ ರಸ್ತೆ ಉಬ್ಬುಗಳು ಸಾಮಾನ್ಯವಾಗಿ ಸಿಗುತ್ತವೆ. ಇದರ ಅರ್ಥ ನಾವು ಪ್ರಯಾಣದಿಂದ ಹಿಂದೆ ಸರಿಯಲಿ ಎಂದಲ್ಲ. ಪ್ರಯಾಣವೆಂದರೆ ರಸ್ತೆ ಉಬ್ಬುಗಳು ಎದುರಾಗುತ್ತವೆ ಹಾಗೂ ಕೆಂಪು ದೀಪಗಳು ಹಸಿರಾಗುತ್ತವೆ’ ಎಂದು ಹೇಳಿದರು.

ಸೀಟು ಹಂಚಿಕೆ ಸಂಬಂಧ ಪಶ್ವಿಮ ಬಂಗಾಳದಲ್ಲಿ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT